ಅಧಿಕ ಶುಲ್ಕ ವಸೂಲು: ಪ್ರತಿಭಟನೆ
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.21
ನಗರದ ಆಚಾರ್ಯತುಳಸಿ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂದು ಆರೋಪಿಸಿ ಎನ್ಎಸ್ಯುಐ ಕಾರ್ಯಕರ್ತರು ಗುರುವಾರ ಸಹ ಪ್ರತಿಭಟನೆ ನಡೆಸಿದರು.
ಪರಿಣಾಮವಾಗಿ ಕಾಲೇಜು ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ಪಡೆಯದಿರಲು ನಿರ್ಧಾರ ಕೈಗೊಂಡಿದೆ. ಎಟಿಎನ್ಸಿಸಿಯಲ್ಲಿ ಪ್ರಥಮ ಮತ್ತು ಬಿಬಿಎಂ ವಿದ್ಯಾರ್ಥಿಗಳಿಂದ ರು. 1,714 ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಶುಲ್ಕ ಎಂದು ವಸೂಲಿ ಮಾಡಲಾಗುತ್ತಿದೆ. ಅದರೊಂದಿಗೆ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಕೂಡ ವಸೂಲಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಸಂಕಷ್ಟದಲ್ಲಿ ವಿದ್ಯಾರ್ಥಿಗಳು: ಕಾಲೇಜಿನಲ್ಲಿರುವ ಅರೆಕಾಲಿಕ ಉಪನ್ಯಾಸಕರಿಗೆ ವೇತನ ನೀಡಲು ಕಾಲೇಜು ಆಡಳಿತ ಮಂಡಳಿ ಬಳಿ ಹಣವಿಲ್ಲವೆಂದು, ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ರು. 10,500, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಂದ ರು. 5,800 ಹಾಗೂ ಇತರೆ ವಿದ್ಯಾರ್ಥಿಗಳಿಂದ ರು. 6,300 ಸಂಗ್ರಹಿಸಲಾಗಿದೆ. ವಿದ್ಯಾರ್ಥಿಗಳು ನಿಗಧಿತ ಶುಲ್ಕವನ್ನು ಕಡ್ಡಾಯವಾಗಿ ಕಟ್ಟಲೇಬೇಕು ಎಂದು ಎನ್ಇಎಸ್ ಆಡಳಿತ ಮಂಡಳಿ ಆದೇಶಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದರು.
ಸರ್ಕಾರದ ನಿಯಮಾವಳಿ ಪ್ರಕಾರ ಯಾವುದೇ ಕಾಲೇಜಿನಲ್ಲಿ ಕ್ಯಾಪಿಟಲ್ ಶುಲ್ಕ ಪಡೆಯುವಂತಿಲ್ಲ. ಅಲ್ಲದೆ ಕೆಲ ಕಾಲೇಜುಗಳಲ್ಲಿ ಪ್ರಥಮ ಸೆಮಿಸ್ಟರ್ಗೆ ಪ್ರವೇಶ ನೀಡುವ ಸಂದರ್ಭದಲ್ಲೇ ಎರಡು ಸೆಮಿಸ್ಟರ್ಗಳ ಬೋಧನಾ ಶುಲ್ಕ ಪಡೆಯುತ್ತಿದ್ದಾರೆ. ಆದರೆ, ಆಚಾರ್ಯ ತುಳಸಿ ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳಿಂದ ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಲಾಗಿತ್ತು ಎಂದು ಸಂಘಟನೆ ಜಿಲ್ಲಾಧ್ಯಕ್ಷ ಕೆ. ಚೇತನ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂಧನ್ ತಿಳಿಸಿದ್ದಾರೆ.
ಪರೀಕ್ಷೆಯಿಂದ ದೂರ: ಕಾಲೇಜಿನಲ್ಲಿ ಬಡ, ದಲಿತ, ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ವಿಧಿಸಿರುವ ಹೆಚ್ಚುವರಿ ಶುಲ್ಕ ಕಟ್ಟಲಾಗದೆ ಪರೀಕ್ಷೆಯಿಂದ ದೂರ ಉಳಿಯುತ್ತಾರೆ. ಆದ್ದರಿಂದ ಇಂತಹ ನೀತಿಯನ್ನು ಜಾರಿ ಮಾಡಿರುವ ಕಾಲೇಜಿನ ಆಡಳಿತ ಮಂಡಳಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಕಾಲೇಜು ಆಡಳಿತ ಮಂಡಲಿ ನಮ್ಮ ಹೋರಾಟಕ್ಕೆ ಸ್ಪಂದಿಸಿತ್ತು. ತನ್ನ ನಿರ್ಧಾರದಿಂದ ಇದೀಗ ಹಿಂದೆ ಸರಿದಿದೆ ಎಂದು ಮಧುಸೂಧನ್ ತಿಳಿಸಿದರು.