ಇಂಡಿಯನ್ ಡೆಮೊಕ್ರೆಟಿಕ್ ಪಕ್ಷದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಸಾಗರ, ಮಾ.21
ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಚುನಾವಣೆ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಇಂಡಿಯನ್ ಡೆಮೊಕ್ರೆಟಿಕ್ ಪಕ್ಷದ ಕಾರ್ಯಕರ್ತರು ಪೇಟೆಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪಕ್ಷದ ಕಾರ್ಯಕರ್ತರ ಮೇಲೆ ನಗರಸಭೆ 28ನೇ ವಾಡರ್ನ ಸದಸ್ಯೆ ಬೀಬಿ ಫಸಿಹಾ ಅವರ ಪತಿ ಸೈಯದ್ ಶಕೀಲ್, ಅಜರ್, ಖುದ್ದೂಸ್ ಸೇರಿದಂತೆ 50ಕ್ಕೂ ಹೆಚ್ಚು ಜನರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರು ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆದಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ನ ಸೈಯದ್ ಶಕೀಲ್ ಇನ್ನಿತರರು ನಮ್ಮ ಕಾರ್ಯಕರ್ತರಾದ ರಾಜು, ನಾಣಿ, ಗಣೇಶ್, ಶರತ್, ನವೀನ್, ಕಾಮತ್ ಮುಂತಾದ ಕಾರ್ಯಕರ್ತರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಕೆ.ಎಲ್.ಭೋಜರಾಜ್, ಪ್ರಧಾನ ಕಾರ್ಯದರ್ಶಿ ಮೇಘರಾಜ್ ಎನ್, ಪ್ರಮುಖರಾದ ನಾಣಿ, ಪ್ರದೀಪ್, ಸುನೀಲಲ್ಗೋಮ್ಸ್, ಸವಿತಾ, ಸಾವಿತ್ರಮ್ಮ, ರಾಜು ಇನ್ನಿತರರು ಹಾಜರಿದ್ದರು.