ರಾಷ್ಟ್ರಮಟ್ಟದ ಪುರಸ್ಕಾರ: ವಿದ್ಯಾರ್ಥಿಗಳಿಗೆ ಅಭಿನಂದನೆ
ಕ.ಪ್ರ.ವಾರ್ತೆ,ಶಿವಮೊಗ್ಗ, ಮಾ.21-
ಸಂಸ್ಕೃತ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿದ ಡಿವಿಎಸ್ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿಗಳು ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ನಗದು ಪುರಸ್ಕಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ. ಸುಬ್ರಹ್ಮಣ್ಯ, ನಮ್ಮ ಕಾಲೇಜಿನ ಐವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸಂಸ್ಕೃತ ಸಂಸ್ಥಾನದ ಪುರಸ್ಕಾರಕ್ಕೆ ಪಾತ್ರರಾಗಿರುವುದು ಸಂತಸಕರ ಸಂಗತಿಯಾಗಿದೆ. ಇದು ಹೆಮ್ಮೆಯ ವಿಷಯ ಎಂದರು.
ಸಂಸ್ಕೃತದಲ್ಲಿ ಅಪಾರವಾದ ಜ್ಞಾನ ಸಂಪತ್ತು ಅಡಗಿದೆ. ಸಂಸ್ಕೃತ ಕಲಿಕೆಯಿಂದ ಸಾಕಷ್ಟು ಅನುಕೂಲಕರವಾಗಿದೆ. ಇತರೆ ಭಾಷೆಗಳ ಕಲಿಕೆಯ ಜೊತೆಗೆ ಮಾತೃಭಾಷೆ ಕಲಿಕೆಗೂ ಒತ್ತು ನೀಡಬೇಕು. ಆಳವಾದ ಜ್ಞಾನ ಸಂಪಾದನೆ ಮಾಡಬೇಕು ಎಂದರು.
ವಿದ್ವಾನ್ ದತ್ತಮೂರ್ತಿ ಭಟ್ ಮಾತನಾಡಿ, ಆರ್ಥಿಕ ಸಹಾಯ ನೀಡುವ ಮೂಲಕ ರಾಜ್ಯದಲ್ಲಿ ಸಂಸ್ಕೃತ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕಾಗಿದೆ ಎಂದು ತಿಳಿಸಿದರು.
ಸಂಸ್ಕೃತಿ ಸಂಕೇತ: ಸಂಸ್ಕೃತ ಭಾಷೆಯು ಭಾರತೀಯ ಸಂಪ್ರದಾಯ, ಸಂಸ್ಕೃತಿಯ ಸಂಕೇತ. ತನ್ನದೇ ಆದ ಐತಿಹಾಸಿಕ ಮಹತ್ವ ಹೊಂದಿದ ಭಾಷೆಯಾದ್ದು, ಸದ್ಯ ಈ ಭಾಷೆಯ ಬಗ್ಗೆ ಹೆಚ್ಚುತ್ತಿರುವ ಅವಜ್ಞೆಯಿಂದ ಮೂಲೆಗುಂಪಾಗುತ್ತಿದೆ. ಈ ಭಾಷೆಯನ್ನು ಉಳಿಸಿ- ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬರು ಸಂಸ್ಕೃತ ಭಾಷೆ ಕಲಿಕೆಗೆ ಒಲವು ತೋರಬೇಕಾಗಿದೆ ಎಂದು ಕರೆ ನೀಡಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಕಾರ್ಯದರ್ಶಿ ವಿ.ಕೆ. ಸುಬ್ರಹ್ಮಣ್ಯ, ಪ್ರಾಂಶುಪಾಲ ಪಿ. ಸುಧಾಕರ ರಾವ್ ಹಾಗೂ ಸಂಸ್ಕೃತ ಉಪನ್ಯಾಸಕ ವಿದ್ವಾನ್ ದತ್ತಮೂರ್ತಿ ಭಟ್ ಅವರು 3000 ನಗದು ಪುರಸ್ಕಾರದ ಚೆಕ್ ವಿತರಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಜೆ.ಎನ್. ಪೂರ್ಣಿಮಾ, ಸಿ.ಎಸ್. ಮಾಧವಿ, ಭರತ್ ಎಸ್. ಪುರೋಹಿತ್, ಎನ್. ಶ್ವೇತಾ ಹಾಗೂ ವಿ.ಎನ್. ವಿಘ್ನೇಶ್ ಪುರಸ್ಕಾರ ಗೌರವಕ್ಕೆ ಪಾತ್ರರಾದ ವಿದ್ಯಾರ್ಥಿಗಳು.