ವಿಜೃಂಭಣೆಯ ಚಂದ್ರಗುತ್ತಿ ಮಹಾರಥೋತ್ಸವ
ಕನ್ನಡಪ್ರಭ ವಾರ್ತೆ, ಸೊರಬ, ಮಾ.21
ಮಲೆನಾಡಿನ ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ಮಹಾರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ವಿಧಾನ ಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕಾರಿಗಳಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಉಪವಿಭಾಗಾಧಿಕಾರಿ ಉದಯಕುಮಾರ್ ಶೆಟ್ಟಿ, ತಹಸೀಲ್ದಾರ್ ಶ್ರೀಧರ ಮೂರ್ತಿ ಪಂಡಿತ್, ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್, ವೃತ್ತ ನಿರೀಕ್ಷಕರು, ಪಿಎಸ್‌ಐ, ಎಎಸ್‌ಐ ಹಾಗೂ ಕಂದಾಯ, ರಕ್ಷಣಾ ಇಲಾಖೆಯವರು ಪಾಲ್ಗೊಂಡಿದ್ದರು.
ರಥೋತ್ಸವಕ್ಕೆ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕ ಎಚ್. ಹಾಲಪ್ಪ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಮಾಜಿ ಉಪಾಧ್ಯಕ್ಷ ಹುನವಳ್ಳಿ ಗಂಗಾಧರಪ್ಪ, ಪಾಣಿ ರಾಜಪ್ಪ, ಸದಸ್ಯ ಗುರುಕುಮಾರ್ ಪಾಟೀಲ್, ಮಾಜಿ ಸದಸ್ಯೆ ದೇವಕಿ ಪಾಣಿ, ತಾಪಂ ಸದಸ್ಯೆ ಮಧುರಾ ಭಟ್, ಎಪಿಎಂಸಿ ಅಧ್ಯಕ್ಷ ಗಜಾನನರಾವ್, ಗ್ರಾಪಂ ಅಧ್ಯಕ್ಷೆ ಬಸಮ್ಮ, ಮಾಜಿ ಅಧ್ಯಕ್ಷ ಅಂಗಡಿ ಚಂದ್ರಪ್ಪ, ಸದಸ್ಯರು, ಜಾತ್ರಾ, ದೇಗುಲ ಸಮಿತಿಯವರು, ಗ್ರಾಮದ ಹಿರಿಯರು, ಮುಖಂಡರು ಮೊದಲಾದವರು ಇದ್ದರು.
ಇತ್ತೀಚೆಗೆ ಮಾಜಿ ಶಾಸಕ ಹಾಲಪ್ಪ ಅವರು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನ್ನದಾಸೋಹ ನಡೆಸುತ್ತಿದ್ದರು. ಈ ವರ್ಷವೂ ಎಲ್ಲ ತಯಾರಿ ನಡೆಸಲಾಗಿತ್ತು, ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನ್ನ ದಾಸೋಹ ನಡೆಸುವಂತಿಲ್ಲ ಎಂದು ಅಧಿಕಾರಿಗಳು ತಡೆದರು.
ಪಕ್ಷ ಪ್ರಚಾರವಿಲ್ಲದೆ, ಯಾವುದೇ ಸಾರ್ವಜನಿಕರ ಪರವಾಗಿ ಅನ್ನದಾಸೋಹ ನಡೆಸಲು ಅವಕಾಶ ಕೊಡಿ ಎಂದು ಹಾಲಪ್ಪ ವಿನಂತಿಸಿದರೂ ಸಹಾ ಅವಕಾಶ ನೀಡಲಿಲ್ಲ, ಹಾಗಾಗಿ ಸಿದ್ಧತೆಗಳೆಲ್ಲ ವ್ಯರ್ಥವಾಯಿತು.
ಅನ್ನ ದಾಸೋಹ ಸ್ವೀಕರಿಸಲು ಬಂದ ಭಕ್ತಾದಿಗಳು ನಿರಾಸೆಯಿಂದ ಹಿಂತಿರುಗುವಂತಾಯಿತು.