ಖರೀದಿಗೆ ಮುನ್ನ ಗುಣಮಟ್ಟ ಪರೀಕ್ಷೆ ಅಗತ್ಯ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಮಾ.22
ಗ್ರಾಹಕರು ವಸ್ತುಗಳ ಖರೀದಿಗೆ ಮುನ್ನ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಕ್ಷಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ. ಶೆಟ್ಟರ ತಿಳಿಸಿದ್ದಾರೆ.
ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಬಳಕೆದಾರರ ವೇದಿಕೆ ಗುರುವಾರ ನಗರದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಆ ವಸ್ತುಗಳ ಮೇಲೆ ನಮೂದಿಸಿರುವ ಗುಣಮಟ್ಟದ ಚಿಹ್ನೆ ಪರೀಕ್ಷಿಸಬೇಕು. ಆ ನಂತರವಷ್ಟೇ ಆ ವಸ್ತುವನ್ನು ಖರೀದಿಸುವುದರಿಂದ ವ್ಯಾಪಾರಸ್ಥರಿಂದಾಗುವ ವಂಚನೆಯನ್ನು ತಪ್ಪಿಸಬಹುದು ಎಂದರು.
ಸದುಪಯೋಗ ಪಡೆಯಿರಿ: ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಮೂಲಕ ಗ್ರಾಹಕರು ತಮಗಾಗಿರುವ ಅನ್ಯಾಯಕ್ಕೆ ಪರಿಹಾರವನ್ನು ಪಡೆಯಲು ದೂರು ನೀಡುವುದರ ಮೂಲಕ ಮುಂದಾಗಬೇಕು ಎಂದ ಅವರು, ಸಣ್ಣ- ಪುಟ್ಟ ವಿಷಯಗಳಿಗೂ ದೂರು ದಾಖಲಿಸುವುದರಿಂದ ಕಾನೂನಿನ ಜಾಗೃತಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಸದುಪಯೋಗ ಪಡೆಯಬೇಕೆಂದರು.
ಗ್ರಾಹಕರು ಎಚ್ಚೆತ್ತುಕೊಳ್ಳಿ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಟಿ. ನಂಜಪ್ಪ ಮಾತನಾಡಿ, ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುವುದರಿಂದ ತಮಗೆ ಆಗಿರುವ ಅನ್ಯಾಯಗಳ ವಿರುದ್ಧ ಪ್ರತಿಭಟಿಸದಿದ್ದರೆ, ನ್ಯಾಯ ಸಿಕ್ಕಿದಂತಾಗುವುದಿಲ್ಲ. ಆದ್ದರಿಂದ ಗ್ರಾಹಕರು ಭ್ರಷ್ಟಾಚಾರ, ವಂಚನೆ ಮುಕ್ತ ವ್ಯವಹಾರಕ್ಕಾಗಿ ಕಾಯ್ದೆಯ ಸದ್ಭಳಕೆ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಬಳಕೆದಾರರ ವೇದಿಕೆ ಅಧ್ಯಕ್ಷ ಬಿ.ವಿ. ಗೋಪಾಲಕೃಷ್ಣ ಮಾತನಾಡಿ, ಗ್ರಾಹಕರ ಅರಿವು ಪಂಚಾಯಿತಿ ಮಟ್ಟದಲ್ಲೇ ಆಗುವುದರಿಂದ ಕಾಯ್ದೆ ವ್ಯಾಪಕ ಜಾಗೃತಿಯಾದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಗ್ರಾಹಕನ ಜವಾಬ್ದಾರಿ ಪ್ರಮುಖ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಸಸಿಕಾಂತ ಸೆಂಥಿಲ್ ಪದಾರ್ಥಗಳ ಮಾರಾಟದಲ್ಲಾಗುವ ವಂಚನೆ ಮತ್ತಿತರ ಮೋಸಗಳನ್ನು ತಡೆಗಟ್ಟುವಲ್ಲಿ ಗ್ರಾಹಕನ ಜವಾಬ್ದಾರಿ ಪ್ರಮುಖವಾದದ್ದು ಎಂದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎಂ. ಜಯಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎಚ್. ಮಹೇಂದ್ರಪ್ಪ, ಜಿಲ್ಲಾ ಬಳಕೆದಾರರ ವೇದಿಕೆಯ ಕಾರ್ಯದರ್ಶಿ ಟಿ.ಎಸ್. ನಾಗರಾಜ್, ಕಾನೂನು ಮಾಪನಶಾಸ್ತ್ರ ಇಲಾಖೆ ಉಪನಿಯಂತ್ರಕ ಬೀರೇಂದ್ರಕುಮಾರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಿ.ಆರ್. ವಿಶ್ವನಾಥ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು, ಕಾನೂನು ಮಾಪನ ಸಹಾಯಕ ನಿಯಂತ್ರಕ ಎಂ.ಎನ್. ಹಿಪ್ಪರಗಿ ಉಪಸ್ಥಿತರಿದ್ದರು.