ಮೇಲಧಿಕಾರಿಗಳಿಗೆ ಜೀವ ಬೆದರಿಕೆ: ಕೇಸು ದಾಖಲು
ಕ.ಪ್ರ. ವಾರ್ತೆ ಶಿವಮೊಗ್ಗ ಮಾ.22
ಡಿ ಗ್ರೂಪ್ ನೌಕರನೊಬ್ಬ ಕಚೇರಿಗೆ ಬಂದು ಮೇಲಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ ಬಗ್ಗೆ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರ ತಿಮ್ಮಪ್ಪ ಅವರ ವಿರುದ್ಧ ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣರಾವ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಧಿಕಾರಿ ಡಾ. ಶಿವಣ್ಣ ರೆಡ್ಡಿ ಅವರ ದೂರು ನೀಡಿದ್ದಾರೆ.
ಸರ್ಕಾರವು ದಿನಗೂಲಿ ನೌಕರರ ಸೇವೆ ಖಾಯಂ ಆದೇಶ ಮಾಡಿದ್ದು, ಈ ಕೆಲಸ ಮಾಡಿಸಿಕೊಡಲು ತಿಮ್ಮಪ್ಪ ಅವರು ಜಿಲ್ಲೆಯಲ್ಲಿ ನೌಕರರಿಂದ ತಲಾ 20 ಸಾವಿರದಂತೆ ಹಣ ವಸೂಲಿ ಮಾಡಿದ ಬಗ್ಗೆ ಇಲಾಖೆಗೆ ದೂರು ಬಂದಿತ್ತು.
ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಹಲವರಿಂದ ಹೇಳಿಕೆ ಪಡೆದಿದ್ದರು. ದಿನಗೂಲಿ ಡಿ ಗ್ರೂಪ್ ನೌಕರರ ಸಂಘದ ಕಾರ್ಯದರ್ಶಿ ಆರ್. ಚಂದ್ರಶೇಖರ್, ಖಜಾಂಚಿ ಧರ್ಮರಾಜ್ ಸಹ ತಿಮ್ಮಪ್ಪ ವಿರುದ್ಧ ಹೇಳಿಕೆ ನೀಡಿದ್ದರು.
ಆರೋಗ್ಯ ಇಲಾಖೆಯಲ್ಲಿ ಜಿಲ್ಲೆಯಾದ್ಯಂತ 53 ದಿನಗೂಲಿ ನೌಕರರಿದ್ದು, ಅವರಲ್ಲಿ 50 ಜನರಿಂದ ತಲಾ 20 ಸಾವಿರ ಹಣವನ್ನು ತಿಮ್ಮಪ್ಪ ಸಂಗ್ರಹಿಸಿದ್ದಾನೆ ಎಂಬ ದೂರಿನ ಅನ್ವಯ ಈ ವಿಚಾರಣೆ ನಡೆದಿತ್ತು.
ಈ ವಿಷಯ ತಿಳಿದ ತಿಮ್ಮಪ್ಪ ಶುಕ್ರವಾರ ಬೆಳಿಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಆಗಮಿಸಿ ಕೃಷ್ಣರಾವ್ ಹಾಗೂ ಮತ್ತಿತರ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಆಗ ಕಚೇರಿಯಲ್ಲಿ ಡಿಎಚ್ಓ ಡಾ. ಶಿವಣ್ಣ ರೆಡ್ಡಿ ಅವರೂ ಸಹ ಇದ್ದರು.
ಘಟನೆಯ ನಂತರ ಕೃಷ್ಣರಾವ್ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ.