ಶಿಕ್ಷಣದಿಂದ ಸಮಾಜ ಸುಧಾರಣೆ
ಕ.ಪ್ರ ವಾರ್ತೆ, ಶಿಕಾರಿಪುರ, ಮಾ.22
ಶಿಕ್ಷಣದಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯವಿದೆ. ಉನ್ನತ ಶಿಕ್ಷಣಕ್ಕೆ ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದರೂ ಮುಸ್ಲಿಂ ಸಮುದಾಯದಲ್ಲಿ ಇಂದಿಗೂ ಶಿಕ್ಷಣದಿಂದ ಹಲವರು ದೂರ ಉಳಿಯುತ್ತಿದ್ದಾರೆ ಎಂದು ರಾಜ್ಯ ಉರ್ದು ಅಕಾಡೆಮಿ ಅದ್ಯಕ್ಷ, ಸ್ಥಳೀಯ ಸುನ್ನಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ತಿಳಿಸಿದರು.
ಇತ್ತೀಚೆಗೆ ನಡೆದ ಗುಲ್ಬರ್ಗಾ ವಿಶ್ವವಿಶ್ವದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸಾಮಾಜಿಕ ಕಾರ್ಯದಲ್ಲಿ ಜಾತಿ, ಧರ್ಮ ಅಡ್ಡ ಬರದಂತೆ ತಿಳಿಸಿದ ಅವರು, ಮನುಷ್ಯ ಸಾಮಾಜಿಕ ಕಾರ್ಯದಲ್ಲಿ ಜಾತಿ ಮತ ಮೀರಿ ಕೇವಲ ಮನುಷ್ಯತ್ವದ ಮೂಲಕ ಎಲ್ಲಾ ವರ್ಗವನ್ನು ಒಪ್ಪಿಕೊಳ್ಳುವ ದೊಡ್ಡತನ ತೋರಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಎಲ್ಲ ವರ್ಗದವರಿಗೂ ವಿದ್ಯೆ: ಮುಸ್ಲಿಂ ಯುವಕರು ಕೇವಲ ಬಸ್ ನಿಲ್ದಾಣದಲ್ಲಿ ಶೇಂಗಾ, ಟೀ ಮಾರುವ ಜತೆಗೆ ಹಮಾಲಿ ವೃತ್ತಿಯಲ್ಲಿ ತೊಡಗಿಸಿಕೊಳ್ಳುವುದನ್ನು ಕಂಡು ಶಿಕ್ಷಣದಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎಂಬುದನ್ನು ಅರಿತು ಆರಂಭಿಸಿದ ವಿದ್ಯಾಸಂಸ್ಥೆ ಇಂದು ರಾಜ್ಯದಲ್ಲಿಯೇ ಪ್ರಸಿದ್ಧ ವಸತಿ ಶಾಲೆಯಾಗಿ ಬಡ ಮಕ್ಕಳು ಉಚಿತವಾಗಿ ಶಿಕ್ಷಣ ಪಡೆಯುವ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಜಾತಿ, ಮತ ಮೀರಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಶಿವಶರಣೆಯರ ತಪೋಭೂಮಿಯಾದ ಶಿಕಾರಿಪುರದ ನೆಲ, ಜಲದಲ್ಲಿ ಅವರ ಪ್ರಬಾವ ಹೆಚ್ಚಾಗಿದೆ. 1982ರಲ್ಲಿ ರಚಿಸಿದ ಪ್ರಥಮ ಘಜಲ್ ನಂತರದಲ್ಲಿ ಹಲವು ಮಕ್ಕಳ ಸಾಹಿತ್ಯ ರಚಿಸಲು ಶಿವಶರಣೆಯರು ಪ್ರೇರಣೆಯಾಗಿದ್ದಾರೆ. ಈಗಾಗಲೇ ಬಸವಣ್ಣನವರ 2 ಸಾವಿರ ವಚನವನ್ನು ಭಾಷಾಂತರಿಸಲಾಗಿದೆ. ಶ್ರೀಮಂತ ಕನ್ನಡ ಸಾಹಿತ್ಯವನ್ನು ಉರ್ದು ಭಾಷೆಗೆ ಭಾಷಾಂತರಿಸುವುದಾಗಿ ತಿಳಿಸಿದರು.
ಸಂಘದ ಖಜಾಂಚಿ ಬಿ.ಎಲ್. ರಾಜು ಮಾತನಾಡಿ, ಸಾವಿರಾರು ನಿರ್ಗತಿಕರ ಶಿಕ್ಷಣ ಕೇಂದ್ರವಾಗಿ ಕಂಗೊಳಿಸುತ್ತಿರುವ ಸುನ್ನಾ ವಿದ್ಯಾಸಂಸ್ಥೆಯ ಆರಂಭದಿಂದ ಮೌಲಾನಾ ಅಮ್ಜದ್ ಹುಸೇನ್ ಶ್ರಮ ಸಾರ್ಥಕವಾಗಿದ್ದು ನಿಷ್ಟುರವಾದಿ ನಡತೆಯ ಹಿಂದೆ ಸದುದ್ದೇಶವಿದೆ ಎಂದರು.
ಶ್ರೇಷ್ಟ ಗ್ರಂಥ: ಅಧ್ಯಕ್ಷತೆಯನ್ನು ವಹಿಸಿದ್ದ ತಾ. ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿದರು. ಸರ್ಕಾರಿ ಬಸ್ ನಿರ್ವಾಹಕ ನಟರಾಜ ಕುಂದೂರು ಅವರ ಕನ್ನಡ ಭಾಷಾಭಿಮಾನವನ್ನು ಗೌರವಿಸಿ ಅಭಿನಂದಿಸಲಾಯಿತು. ಸಂಘದ ಕಾರ್ಯದರ್ಶಿ ಚಂದ್ರು, ಬಸವರಾಜ, ರಾಘವೇಂದ್ರ, ಪ್ರದೀಪ ದೀಕ್ಷಿತ್, ರಘು,ಪ್ರಕಾಶ್, ಕಾಳಿಂಗರಾವ್, ನರಸಿಂಹಸ್ವಾಮಿ, ಕೋಟೇಶ್ವರ, ಸಂಜುಸ್ವಾಮಿ ಉಪಸ್ಥಿತರಿದ್ದರು.