ಶಿವಮೊಗ್ಗದಲ್ಲಿ ಅವತರಿಸಿದ ವಿಧಾನಸೌಧ
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.22
ನಗರದ ಕುವೆಂಪು ರಂಗಮಂದಿರದಲ್ಲಿ ವಿಧಾನಸೌಧವೇ ಅವತರಿಸಿದೆ. ವಿಧಾನಸೌಧಕ್ಕೆ ಶಂಕುಸ್ಥಾಪನೆಯಾದಲ್ಲಿಂದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಲ್ಲಿನವರೆಗಿನ ವಿಧಾನಸೌಧದ ಒಳಹೊರಗಿನ ಹೂರಣ ಛಾಯಾಚಿತ್ರಗಳ ಮೂಲಕ ಇಲ್ಲಿ ಪ್ರಸ್ತುತಗೊಂಡಿದೆ.
2012ರ ಜೂ.18ರಂದು ರಾಜ್ಯ ವಿಧಾನಸಭೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ಈ ಛಾಯಾಚಿತ್ರ ಪ್ರದರ್ಶನದಲ್ಲಿ ರಾಜ್ಯ ಸರ್ಕಾರದ ಪ್ರಮುಖ ಮಜಲುಗಳು ಹಾಗೂ ಪ್ರಮುಖ ಘಟನೆಗಳನ್ನು ಬಿಂಬಿಸುವ 200ಕ್ಕೂ ಅಧಿಕ ಛಾಯಾಚಿತ್ರಗಳನ್ನು ಕಾಣಬಹುದು.
ಶುಕ್ರವಾರ ಬೆಳಿಗ್ಗೆ ಪ್ರದರ್ಶನ ಉದ್ಘಾಟನೆಗೊಂಡಿದ್ದು, ಶನಿವಾರ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆವರೆಗೂ ವೀಕ್ಷಿಸಲು ಅವಕಾಶವಿದೆ.
1942ರಲ್ಲಿ ಪ್ರಜಾಪ್ರತಿನಿಧಿಸಭೆಯ ಅಧಿವೇಶನದಿಂದ 2012ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರದವರೆಗಿನ ಹಲವಾರು ಅಪರೂಪದ ಕ್ಷಣಗಳು ವಾರ್ತಾ ಇಲಾಖೆಯ ಈ ಛಾಯಾಚಿತ್ರ ಸಂಗ್ರಹದಲ್ಲಿ ದಾಖಲಾಗಿದೆ. ಅದನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಅಪರೂಪದ ಘಟನೆಗೆ ಸಾಕ್ಷಿ: ರಾಜ್ಯದ ಶಕ್ತಿ ಕೇಂದ್ರ ಎನಿಸಿರುವ ವಿಧಾನಸೌಧ, ವಾಸ್ತುಶಿಲ್ಪದ ದೃಷ್ಟಿಯಿಂದಲೂ ಐತಿಹಾಸಿಕ ಕಟ್ಟಡ. ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಪ್ರಧಾನಿ ನೆಹರು ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಲ್ಲುಂಟು ಅವಕಾಶ. ಅದೇ ರೀತಿ 1973ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಕರ್ನಾಟಕ ಎಂದು ನಮ್ಮ ರಾಜ್ಯಕ್ಕೆ ಮರುನಾಮಕರಣ ಮಾಡಿದ ಸಂದರ್ಭ, ರಾಜ್ಯದ ನಕ್ಷೆಯನ್ನು ವಿಧಾನಸೌಧದ ಮೆಟ್ಟಿಲಿನಲ್ಲಿ ಅನಾವರಣ ಮಾಡಿದ ಸಂದರ್ಭ, ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ವಿಧಾನಸಭೆ ಅಧಿವೇಶನವೂ ಸೇರಿದಂತೆ ಹಲವಾರು ಅಪರೂಪದ ಘಟನೆಗಳಿಗೆ ಈ ಛಾಯಾಚಿತ್ರಗಳು ಸಾಕ್ಷಿಯಾಗಿವೆ.
ಬಿ.ಆರ್. ಅಂಬೇಡ್ಕರ್ ಬೆಂಗಳೂರು ಭೇಟಿ, ಬೆಂಗಳೂರಿನಲ್ಲಿ ನಡೆದ ಸಾರ್ಕ್ ಸಮ್ಮೇಳನ, ಅಖಿಲ ಭಾರತ ಸ್ಪೀಕರ್ಗಳ ಸಮ್ಮೇಳನ, ಚೀನಾ ಪ್ರಧಾನಿ ಚೌ ಎನ್ ಲೈ, ವಿಯೆಟ್ನಾಂ ಅಧ್ಯಕ್ಷ, ಸಾಫ್ಟ್ವೇರ್ ಕ್ಷೇತ್ರದ ದಿಗ್ಗಜ ಬಿಲ್ಗೇಟ್ಸ್ರ ಭೇಟಿ ಮುಂತಾದ ಅಪರೂಪದ ಚಿತ್ರಗಳು ಈ ಚಿತ್ರ ಭಂಡಾರದಲ್ಲಿದೆ.
ವಿಧಾನಸೌಧದ ರೂವಾರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸ್ಪೀಕರ್ಗಳ ಭಾವಚಿತ್ರಗಳು ಪ್ರದರ್ಶನದ ತೂಕ ಹೆಚ್ಚಿಸಿದೆ. ಜೊತೆಗೆ ಸುವರ್ಣಸೌಧದ ನಿರ್ಮಾಣದ ವಿವಿಧ ಹಂತಗಳಿಂದ ಹಿಡಿದು ಉದ್ಘಾಟನಾ ಕಾರ್ಯಕ್ರಮಗಳನ್ನು ಮೆಲುಕು ಹಾಕಲು ಇದೊಂದುಅವಕಾಶ.
ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ಅಪರೂಪದ ಛಾಯಾಚಿತ್ರ ವೀಕ್ಷಿಸಬೇಕೆಂದು ಜಿಲ್ಲಾ ವಾರ್ತಾಧಿಕಾರಿ ಜಿ. ಹಿಮಂತರಾಜು ವಿನಂತಿಸಿದ್ದಾರೆ.
ಉದ್ಘಾಟನೆ: ವಾರ್ತಾ ಇಲಾಖೆಯ ವಿಧಾನಸಭೆ- 60ಎಂಬ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಶುಕ್ರವಾರ ಬೆಳಿಗ್ಗೆ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸ್ವತಂತ್ರ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯದ ಪ್ರಥಮ ವಿಧಾನಸಭೆ ಅಸ್ತಿತ್ವಕ್ಕೆ ಬಂದು 1952ರ ಜೂನ್ 18ರಂದು ಬೆಂಗಳೂರಿನ ಅಠಾರಾ ಕಚೇರಿಯಲ್ಲಿ (ಇಂದಿನ ಹೈಕೋರ್ಟ್ ಕಟ್ಟಡ) ತನ್ನ ಪ್ರಥಮ ಅಧಿವೇಶನ ನಡೆಸಿತ್ತು. ಇದೀಗ 2012ರ ಜೂನ್ಗೆ ರಾಜ್ಯ ವಿಧಾನಮಂಡಲಕ್ಕೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆ ರಾಜ್ಯದ ವಿಧಾನ ಮಂಡಲದ ಇತಿಹಾಸವನ್ನು ಜನಸಾಮಾನ್ಯರಿಗೆ ಛಾಯಾಚಿತ್ರಗಳ ಮೂಲಕ ಪರಿಚಯಿಸುವ ಈ ಪ್ರದರ್ಶನ ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ರಂಗಾಯಣ ಶಿವಮೊಗ್ಗ ಘಟಕದ ನಿರ್ದೇಶಕ ಹೊ.ನ. ಸತ್ಯ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಹಾಜರಿದ್ದರು.