ಸಂಪನ್ಮೂಲ ನಿರ್ಲಕ್ಷಿಸಿದರೆ ಅಭಿವೃದ್ಧಿ ಅಸಾಧ್ಯ: ಜೋಗಳೆ
ಸಾಗರ: ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದಲ್ಲಿ, ರಾಜಕಾರಣಿಗಳ ಚಿಂತನೆ ಹಾಗೂ ಆರ್ಥಿಕ ತಜ್ಞರ ಯೋಜನಾಪಟ್ಟಿಗಳಲ್ಲಿ ಯುವಜನರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿ.ಬಿ.ಜೋಗಳೆ ಹೇಳಿದರು.
ಇಲ್ಲಿನ ಎಲ್.ಬಿ. ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರ್ಗತ ಹಣಕಾಸು ಮತ್ತು ಅಭಿವೃದ್ದಿ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಮಾನವ ಸಂಪನ್ಮೂಲ ಹೇರಳವಾಗಿರುವ ಭಾರತದಂತಹ ದೇಶದಲ್ಲಿ ಅದನ್ನು ಸದ್ಭಳಕೆ ಮಾಡಿಕೊಳ್ಳದಿದ್ದರೆ ಅಭಿವೃದ್ದಿಯ ವೇಗ ಹೆಚ್ಚಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ಹಿನ್ನಡೆ: ನಮ್ಮ ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳ ಸಾಲ ನೀತಿ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ ಎಂದ ಅವರು, ಬ್ಯಾಂಕ್ ವ್ಯವಸ್ಥೆಯಿಂದ ಬಡವರು ಬದಲಾಗುತ್ತಾರೆ ಎನ್ನುವುದು ಸುಳ್ಳಾಗಿಯೇ ಉಳಿದಿದೆ. ದೇಶದ ಶೇ. 31ರಷ್ಟು ಜನರು ಮಾತ್ರ ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಉಳ್ಳವರಿಗೆ ನೆರವು ನೀಡುವ ಬ್ಯಾಂಕಿಂಗ್ ನೀತಿಯೇ ಕಾರಣವಾಗಿದೆ ಎಂದು ವಿವರಿಸಿದರು.
ಶೇ. ಒಂದರಷ್ಟು ಕಡುಬಡವರಿಗೆ ನೀಡಬೇಕಾದ ಸಾಲವನ್ನು ಯಾವ ಸರ್ಕಾರಿ ಸಾಮ್ಯದ ಬ್ಯಾಂಕೂ ಪಾಲಿಸದಿರುವುದು ನಮ್ಮ ಜಿಡಿಪಿ ಕುಸಿತಕ್ಕೆ ಕಾರಣ ಎಂದು ವಿಷಾದಿಸಿದರು.
ಪ್ರಾಚಾರ್ಯ ಪ್ರೊ..ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಅಭಿವೃದ್ದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮೋಹನ್, ಖಜಾಂಚಿ ಕೆ.ಎಸ್.ವಾಮನರಾವ್, ಸಹ ಕಾರ್ಯದರ್ಶಿ .ದೀಪಕ್, ರವೀಂದ್ರ ಸಭಾಹಿತ್, ಶಿವಮೊಗ್ಗ ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಶನ್ನ ಚಿನ್ನಪ್ಪ ಶೆಟ್ಟಿ ಹಾಜರಿದ್ದರು. ಡಾ.ಟಿ.ಎಸ್.ರಾಘವೇಂದ್ರ ಸ್ವಾಗತಿಸಿದರು. ಡಾ.ಸುಮುಖ ವಂದಿಸಿದರು. ಪ್ರೊ.ಶಿವಕುಮಾರ್ ನಿರೂಪಿಸಿದರು.