ಇನಾಂ ಭೂಮಿ ತೆರವಿಗೆ ತಾತ್ಕಾಲಿಕ ರಿಲೀಫ್
ಕ.ಪ್ರ ವಾರ್ತೆಚಿಕ್ಕಮಗಳೂರುಮಾ. 23
ಕಳಸ ಗ್ರಾಮದ ಶ್ರೀ ಕಳಸೇಶ್ವರ ದೇವಾಲಯದ ಇನಾಂ ಜಮೀನುಗಳ ತೆರವಿಗೆ ಮತ್ತೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ.
ಹೈಕೋರ್ಟ್ನ ವಿಭಾಗೀಯ ಪೀಠ ಆಗಸ್ಟ್ 31ರ ವರೆಗೆ ತೆರವಿಗೆ ಕಾಲಾವಕಾಶ ನೀಡಿದೆ. ಇದರಿಂದಾಗಿ ತಾತ್ಕಾಲಿಕವಾಗಿ ರಿಲೀಪ್ ಸಿಕ್ಕಿದಂತಾಗಿದೆ.
ಕಳಸ ಇನಾಂ ಮೀಸಲು ಅರಣ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ವಾಧೀನದಾರರನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ ಕಳೆದ ಡಿಸೆಂಬರ್ 31ರೊಳಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಇದರಿಂದಾಗಿ 636 ಕುಟುಂಬಗಳು ಆತಂಕದಲ್ಲಿದ್ದವು. 2005ರಲ್ಲಿ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅಪೀಲ್ನಲ್ಲಿ ಸರ್ಕಾರವೇ ಇದು, ಮೀಸಲು ಅರಣ್ಯ ಹೇಳಿತ್ತು.
ಮೂಡಿಗೆರೆ ತಾಲೂಕಿನ ಮಾವಿನಕೆರೆ, ತೋಟದೂರು ಮತ್ತು ತಲಗೋಡು ಗ್ರಾಮಗಳ ವ್ಯಾಪ್ತಿಯಲ್ಲಿ 14,340 ಎಕರೆ ಜಮೀನನ್ನು ಶ್ರೀ ಕಳಸೇಶ್ವರ ದೇವಾಲಯಕ್ಕೆ ಇನಾಂ ನೀಡಲಾಗಿತ್ತು. ಇದರಲ್ಲಿ 10,776-18 ಎಕರೆ ಗೋಮಾಳ, ಖರಾಬು ಹಾಗೂ ಬಂಜರು ಭೂಮಿ ಆಗಿರುತ್ತದೆ. ಅರಣ್ಯ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಹೈಕೋರ್ಟ್ನ ಸೂಚನೆಯ ಮೇರೆಗೆ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿ ಹೈಕೋರ್ಟ್ಗೆ ವರದಿ ನೀಡಿತ್ತು.
ಜಂಟಿ ಸರ್ವೆ; ಈ ವರದಿಯ ಆಧಾರದ ಮೇಲೆ ಮೀಸಲು ಅರಣ್ಯದ ಭೂಮಿಯನ್ನು ತೆರವುಗೊಳಿಸುವಂತೆ ನ್ಯಾಯಾಲಯ ಕಳೆದ ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಿತ್ತು. ಆದರೆ, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನೀಡಿರುವ ವರದಿಗಳು ಒಂದಕ್ಕೊಂದು ತಾಳೆಯಾಗದ ಹಿನ್ನೆಲೆಯಲ್ಲಿ ಜಂಟಿ ಸರ್ವೆಗೆ ಕ್ರಮ ವಹಿಸಲಾಗಿದೆ.
ಸದ್ಯ ಈ ಭಾಗದಲ್ಲಿ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಈ ಕಾರಣವನ್ನು ಮುಂದಿಟ್ಟು ಕೊಪ್ಪದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನ್ಯಾಯಾಲಯಕ್ಕೆ ಕಾಲಾವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ನ ವಿಭಾಗೀಯ ಪೀಠ ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಿದೆ. ಅದುದರಿಂದ ಈ ಜಮೀನಿನಲ್ಲಿರುವ ರೈತರಿಗೆ ತಾತ್ಕಾಲಿಕವಾಗಿ ಸಮಧಾನ ಸಿಕ್ಕಿದಂತಾಗಿದೆ.