ಗ್ರಾಮೀಣ ಕ್ರೀಡೆಗೆ ಉತ್ತೇಜನ ಅಗತ್ಯ
ಕ.ಪ್ರ ವಾರ್ತೆಹೊಸನಗರಮಾ. 23
ನಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ ಎಂದು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎನ್. ಸುಧಾಕರ್ ಹೇಳಿದರು.
ಪಟ್ಟಣದ ಗಾಯತ್ರಿ ಮಂದಿರದಲ್ಲಿ ಜಿಲ್ಲಾ ಖೋಖೋ ಅಸೋಸಿಯೇಶನ್ ಆಯೋಜಿಸಿದ್ದ ಖೋಖೋ ತೀರ್ಪುಗಾರರ ಪರೀಕ್ಷೆ ಉದ್ಘಾಟಿಸಿ, ಸರ್ಕಾರ ಮತ್ತು ಕ್ರೀಡಾ ಸಂಸ್ಥೆಗಳು ಖೋಖೋದಂತ ಆಟಗಳತ್ತ ಮುಖ ಮಾಡಬೇಕಿದೆ ಎಂದರು.
ಪ್ರೋತ್ಸಾಹದ ಕೊರತೆ: ಖೋಖೋ, ಕಬಡ್ಡಿ ಸೇರಿದಂತೆ ಗ್ರಾಮೀಣ ಆಟಗಳು ಸ್ಪರ್ಧೆಗೆ ಮಾತ್ರ ಸೀಮಿತವಲ್ಲ. ಮಾನಸಿಕ ಮತ್ತು ದೈಹಿಕ ಕಸರತ್ತು ನೀಡುವ ಇಂತಹ ಆಟದಿಂದ ದೈಹಿಕ ಕ್ಷಮತೆ ಹೆಚ್ಚುತ್ತದೆ. ದೇಶಿ ಆಟಗಳು ಉತ್ತೇಜನ ಮತ್ತು ಪ್ರೋತ್ಸಾಹ ಕೊರತೆಯಿಂದಾಗಿ ಕಣ್ಮರೆಯಾಗುತ್ತಿರುವುದು ಆತಂಕ ಉಂಟುಮಾಡಿದೆ ಎಂದು ಹೇಳಿದರು.
ಆದರೆ ಖೋಖೋ ಅಸೋಸಿಯೇಶನ್ ಸರ್ಕಾರದ ಸಹಾಯವಿಲ್ಲದೆ ಖೋಖೋ ಆಟದತ್ತ ಹೆಚ್ಚು ಒತ್ತು ನೀಡಿರುವುದು ಶ್ಲಾಘನೀಯ. ಸರ್ಕಾರೇತರ ಸಂಸ್ಥೆಗಳ ಇಂತಹ ಕಾರ್ಯಕ್ರಮಗಳಿಗೆ ಸಮಾಜ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ರಾಜ್ಯ ಖೋಖೋ ಅಸೋಸಿಯೇಶನ್ ಅಧ್ಯಕ್ಷ ಕೆ.ಎಸ್. ಮುಕುಂದ್, ಮಲ್ಲಿಕಾರ್ಜುನಯ್ಯ, ನಟರಾಜ್, ನಿರಂಜನಮೂರ್ತಿ, ಈಶ್ವರಪ್ಪ, ಬಾಲಚಂದ್ರ, ನಾಗರಾಜ ಉಪಸ್ಥಿತರಿದ್ದರು.