ಪ್ರತಿಯೊಂದು ಕ್ರೀಡೆಗೂ ಪ್ರೋತ್ಸಾಹ ಅಗತ್ಯ
ಕ.ಪ್ರ ವಾರ್ತೆಶಿವಮೊಗ್ಗಮಾ. 23
ಪ್ರಸ್ತುತ ಕ್ರೀಡೆ ವ್ಯಾಪಾರವಾಗುತ್ತಿದ್ದು, ಕ್ರೀಡಾ ಮನೋಭಾವದಿಂದ ಆಡುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅಂತರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಎಚ್.ಎನ್. ಕೃಷ್ಣೇಗೌಡ ಆತಂಕ ವ್ಯಕ್ತಪಡಿಸಿದರು.
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು, ಇಂದು ಹೆಚ್ಚಿನ ಕ್ರೀಡಾಪಟುಗಳು ಕೇವಲ ಹಣಕ್ಕಾಗಿ ಆಡುತ್ತಿದ್ದಾರೆ. ಈ ಬೆಳವಣಿಗೆ ಕ್ರೀಡಾಕ್ಷೇತ್ರಕ್ಕೆ ಮಾರಕವಾಗಲಿದೆ ಎಂದರು.
ಪ್ರೋತ್ಸಾಹ ಅಗತ್ಯ: ಇತ್ತೀಚಿನ ದಿನಗಳಲ್ಲಿ ಕೇವಲ ಕ್ರಿಕೆಟ್‌ಗೆ ಹೆಚ್ಚಿನ ಪ್ರೊತ್ಸಾಹ ಸಿಗುತ್ತಿದ್ದು, ಮತ್ತಿತರರ ಕ್ರೀಡೆಗಳು ಮೂಲೆಗುಂಪಾಗುತ್ತಿವೆ. ಆದ್ದರಿಂದ ಪ್ರತಿಯೊಂದು ಕ್ರೀಡೆಯನ್ನು ಪ್ರೋತ್ಸಾಹ ನೀಡುವ ಮೂಲಕ ಬೆಳೆಸುವ ಅಗತ್ಯವಿದೆ ಎಂದರು.
ಕಾಲೇಜು ಶಿಕ್ಷಣ ಎಂಬುದು ವಿದ್ಯಾರ್ಥಿ ಜೀವನದ ಒಂದು ಮಹತ್ತರ ಘಟ್ಟ. ಈ ವೇಳೆ ತೆಗೆದುಕೊಳ್ಳುವ ತೀರ್ಮಾನ ನಿಮ್ಮ ಭವಿಷ್ಯವನ್ನೇ ಬದಲಿಸುತ್ತದೆ. ಹಾಗೇ ಈ ಕಾಲಘಟ್ಟದಲ್ಲಿ ನೀವು ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಜೀವನ ದುಸ್ತರವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ, ದೈಹಿಕ ಶಿಕ್ಷಣ ನಿರ್ದೇಶಕಿ ಎಚ್.ಎಲ್. ರುದ್ರಮ್ಮ ಮತ್ತಿತರರು ಇದ್ದರು.