ಲಾರಿ ಮಗುಚಿ ಇಬ್ಬರು ಬೈಕ್ ಸವಾರರ ಸಾವು
ಕ.ಪ್ರ.ವಾರ್ತೆತೀರ್ಥಹಳ್ಳಿ ಮಾ.23
ಮಂಡಗದ್ದೆ ಸಮೀಪದ ನೆಲ್ಲಿಸರ ಕ್ಯಾಂಪ್ ಹತ್ತಿರ ಮರಳು ಲಾರಿ ಬೈಕ್ ಮೇಲೆ ಮುಗುಚಿಬಿದ್ದು ಬೈಕ್ ಸವಾರ ಸಂತೋಷ್(25) ಹಾಗೂ ಗೀತಾ(21) ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ನೆಡೆದಿದೆ.
ಶನಿವಾರ ಮಧ್ಯಹ್ನ ಸುಮಾರು 1.30ರ ಹೊತ್ತಿಗೆ ಅಪಘಾತ ನೆಡೆದಿದ್ದು, ಅಪಘಾತಕ್ಕೀಡಾದವರು ಶಿವಮೊಗ್ಗದ ಹೊಸಮನೆ ಹಾಗೂ ಬಸವನಗುಡಿಗೆ ಸೇರಿದವರಾಗಿದ್ದಾರೆ. ಕುಪ್ಪಳಿಗೆ ಭೇಟಿ ನೀಡಲು ಅವರು ಹೋಗುತ್ತಿದ್ದರು. ಮಾರ್ಗಮಧ್ಯದಲ್ಲಿ ನೆಲ್ಲಿಸರ ಸಮೀಪ ಮರಳು ಲಾರಿ ಬೈಕಿನ ಮೇಲೆ ಮಗಚಿಬಿದ್ದ ಪರಿಣಾಮವಾಗಿ ಇವರಿಬ್ಬರೂ ಮೃತಪಟ್ಟದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಳೂರು ಪೊಲಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೋರಿ ಬಳಿ ಶವ ಪತ್ತೆ
ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಉಬ್ಬೂರು ರಸ್ತೆಯ ಮೋರಿಯ ಬಳಿ ಕೊಲೆಯಾದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ರಸ್ತೆಬದಿಯಲ್ಲಿಡಲಾಗಿತ್ತು ಎನ್ನಲಾಗಿದೆ.
ಕಾಡಿಗೆ ಕಟ್ಟಿಗೆ ತರಲು ಹೋದ ಗ್ರಾಮಸ್ಥರು ಪೊಲೀಸರ ಗಮನಕ್ಕೆ ಈ ವಿಷಯ ತಂದಿದ್ದು, ಮಾಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ: ಬೈಕ್ ಸವಾರ ಸಾವು
ಶಿರಾಳಕೊಪ್ಪ: ಲಾರಿ ಮತ್ತು ಮೋಟಾರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಿರಾಳಕೊಪ್ಪದಿಂದ ಆನವಟ್ಟಿ ಕಡೆ ಹೊರಟಿದ್ದ ಶುಂಠಿತುಂಬಿದ ಲಾರಿ ಶಿರಾಳಕೊಪ್ಪ ಹತ್ತಿರದ ದೇವಿಕೊಪ್ಪ ಕೆರೆ ಏರಿಯಮೇಲೆ ಮುಂದೆ ಹೊರಟಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಚಾಲಕ ಮೃತಪಟ್ಟಿದ್ದಾನೆ. ಮೃತನನ್ನು ಬಳ್ಳಿಗಾವಿಯ ಹನೀಫ್ ಸಾಬ್ ಎಂಬುವವರ ಮಗ ಜಬೀಉಲ್ಲಾ(22) ಎಂದು ಪತ್ತೆಯಾಗಿದೆ.
ಬೈಕ್ ಡಿಕ್ಕಿ: ಇಬ್ಬರ ಸಾವು
ಸೊರಬ: ಸಾಗರ ರಸ್ತೆಯ ಕುಪ್ಪೆ-ಭೈರೆಕೊಪ್ಪ ಬಳಿ ನಡೆದ ರಸ್ತೆ ಅಪಘಾತಮೊಂದರಲ್ಲಿ ಇಬ್ಬರು ಅಸುನೀಗಿದ್ದಾರೆ.
ಶನಿವಾರ ಮಧ್ಯಾಹ್ನ ಸೊರಬ ಕಡೆಯಿಂದ ಬನದಕೊಪ್ಪ ಗ್ರಾಮಕ್ಕೆ ಬೈಕಲ್ಲಿ ತೆರಳುತ್ತಿದ್ದ ಶಿರಸಿ ತಾಲ್ಲೂಕು ತದ್ದಲಸೆ ಮಹಬಲೇಶ್ವರ ಹಾಗೂ ಕಂಬಳಿಸರದ ಇನ್ನೋರ್ವರು ಪ್ರಯಾಣಿಸುತ್ತಿದ್ದ ಬೈಕ್ ಜಾರಿ ರಸ್ತೆ ಪಕ್ಕದ ಮೋರಿ ಕಲ್ಲಿಗೆ ಅಪ್ಪಳಿಸಿದ್ದು, ಮಹಬಲೇಶ್ವರ ಸ್ಥಳದಲ್ಲಿ, ಆಸ್ಪತ್ರೆಗೆ ಕರೆದೊಯ್ಯುವಾಗ ಇನ್ನೋರ್ವರು ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಜೂಜಾಟ: ಬಂಧನ
ಭದ್ರಾವತಿ: ಬೊಮ್ಮನಕಟ್ಟೆಯ ಬಳಿ ಮಾರುತಿ ವ್ಯಾನೊಂದನ್ನು ನಿಲ್ಲಿಸಿಕೊಂಡು ಬಿ.ಎನ್. ರಫಿ, ಎಸ್.ಎಚ್. ಪೀರಾನ್ ಮತ್ತಿಬ್ಬರು ಜೂಜಾಟದಲ್ಲಿ ನಿರತರಾಗಿದ್ದಾಗ ಭದ್ರಾವತಿ ಗ್ರಾಮಾಂತರ ಆರಕ್ಷಕ ವೃತ್ತ ನಿರೀಕ್ಷಕ ಪರಶುರಾಮಪ್ಪ ದಾಳಿ ನಡೆಸಿ ನಾಲ್ವರನ್ನೂ ಬಂಧಿಸಿದ್ದಾರೆ. ಅವರಿಂದ ರು. 15300 ನಗದು ಹಾಗೂ ಮಟ್ಕಾ ಜೂಜಾಟ ಆಡಲು ಬಳಸಿದ್ದ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.
ವ್ಯಕ್ತಿ ಕಾಣೆ
ಹೊಸಮನೆ ಶಿವಾಜಿ ವೃತ್ತ ಠಾಣಾ ವ್ಯಾಪ್ತಿಯ ಎನ್.ಎಂ.ಸಿ ಬೋವಿ ಕಾಲೋನಿಯ ಐದನೇ ತಿರುವಿನಲ್ಲಿ ವಾಸಿಸುವ ಪಾರ್ವತಿ ಅಲಿಯಾಸ್ ರೂಪ (25) ಮಾ.12ರಿಂದ ಕಾಣೆಯಾಗಿದ್ದು ಹೊಸಮನೆ ಠಾಣೆಯಲ್ಲಿ ದೂರು ದಾಖಲಾಗಿದೆ. ಯರೇಹಳ್ಳಿ ಬಸವಾಪುರದ ವಾಸಿ ಮಾರುತಿ ರಾವ್ (38) ಮಾ.17ರಿಂದ ಕಾಣೆಯಾಗಿದ್ದು ಹೊಸಮನೆ ಶಿವಾಜಿ ವೃತ್ತ ಠಾಣೆಯಲ್ಲಿ ದೂರು ದಾಖಲಾಗಿದೆ. ಸಮೀಪದ ಹುಣಸೆಕಟ್ಟೆ ಜಂಕ್ಷನ್ ವಾಸಿ ಅಮೀನಾ (26) ಮಾ.18ರಂದು ತನ್ನ ಮಗಳು ಫಾತಿಮಾಳನ್ನು (5) ಕರೆದುಕೊಂಡು ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ಹಿಂದಿರುಗಿಲ್ಲ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.