ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶರಣ ಹರಳಯ್ಯ ಶ್ರೇಷ್ಠ ಕಾಯಕ ಯೋಗಿ

Mainashree
Updated On : 24 Mar 2013, 10:32 am

ಕ.ಪ್ರ.ವಾರ್ತೆಶಿವಮೊಗ್ಗ ಮಾ.23
ಶರಣ ಹರಳಯ್ಯನವರು ಯಾವುದೇ ವಚನಗಳನ್ನು ಬರೆದವರಲ್ಲ. ಕಾಯಕಯೋಗಿಯಾಗಿದ್ದುಕೊಂಡೇ ಶ್ರೇಷ್ಠ  ಶರಣರಾದವರು. ಕಲ್ಯಾಣದ ಕೇರಿಯ ಮೂಲೆಯಲ್ಲಿ ಸಣ್ಣ ಗುಡಿಸಲು ನಿವಾಸಿಯಾಗಿದ್ದವರು. ಎಮ್ಮೆ ಚರ್ಮ ತೆಗೆದು ಪಾದರಕ್ಷೆ ಮಾಡಿ ಮಾರಿ ಬದುಕುತ್ತಿದ್ದ ಶರಣ ಹರಳಯ್ಯ ಅವರಿಗೆ ಪೂಜೆಮಾಡುವಾಗ ಎಷ್ಟೂ ಶ್ರದ್ಧೆ  ಇತ್ತೋ, ಚಪ್ಪಲಿ ಹೊಲಿಯುವಾಗಲು ಅದೇ ಶ್ರದ್ಧೆ ಇತ್ತು ಎಂದು ಉಪನ್ಯಾಸಕ ಡಾ. ತುರುವನೂರು  ಮಲ್ಲಿಕಾರ್ಜುನ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಡಿವಿಎಸ್ ಸಂಜೆ ಕಾಲೇಜು ಸಂಯುಕ್ತವಾಗಿ ಕಾಲೇಜು  ಆವರಣದಲ್ಲಿ ಏರ್ಪಡಿಸಿದ್ದ ಶಿಕಾರಿಪುರದ ಎಚ್. ಮೃತ್ಯಂಜಯಪ್ಪ, ಈಶ್ವರಪ್ಪ ಅವರ ದತ್ತಿ ಅಂಗವಾಗಿ ಶರಣ  ಸಮಗಾರ ಹರಳಯ್ಯ ಅವರ ವಚನಗಳ ಅವಲೋಕನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು.
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ  ಶರಣ ಹರಳಯ್ಯ ಬಸವಣ್ಣ ಅವರು ಎದುರಾದಾಗ ಶರಣು ಬಸವಣ್ಣ ಎನ್ನುತ್ತಿದ್ದರು. ಆಗ ಬಸವಣ್ಣ ಶರಣು ಶರಣಾರ್ಥಿಗಳು ಎಂದು ಹೇಳುತ್ತಿದ್ದರು. ಹರಳಯ್ಯ ಒಂದು ಬಾರಿ ಹೇಳಿದರೆ, ಬಸವಣ್ಣ ಎರಡು ಬಾರಿ ಹೇಳುತ್ತಿದ್ದರು. ಶರಣು ಶರಣಾರ್ಥಿಗಳು ಎನ್ನುತ್ತಿದ್ದರು. ಇದು ಹರಳಯ್ಯನವರ ಮನಕದಡಿತು. ಅವರು ಹೆಂಡತಿ ಹತ್ತಿರ ಇದನ್ನು ಹೇಳಿಕೊಂಡು ಬೇಸರ ವ್ಯಕ್ತಪಡಿಸಿದರು. ಹೆಂಡತಿ ನೀಡುವ  ಭಕ್ತಿ ಪೂರ್ವ ಸಲಹೆಯನ್ನು ಅವರು ಚಾಚು ತಪ್ಪದೇ ನಿರ್ವಹಿಸಿದ್ದನ್ನು ವಿವರಿಸಿದರು.
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮೋಹನ ಚಂದ್ರಗುತ್ತಿ ಅವರು ಬೆಂಗಳೂರಿನ ಮಧುರಾ ಅಶೋಕಕುಮಾರ್ ದತ್ತಿ ಅಂಗವಾಗಿ -ಜಾನಪದ ಸಾಹಿತ್ಯದಲ್ಲಿ ಹೆಣ್ಣು- ವಿಚಾರವಾಗಿ ಮಾತನಾಡಿ, ನಮ್ಮ ಜಾನಪದದ ತಾಯಿ ಸೂರ್ಯ ಚಂದ್ರರಿಬ್ಬರನ್ನು ಊಟಕ್ಕೆ ಕಳುಹಿಸುತ್ತಾಳೆ.
ಸೂರ್ಯ ಊಟಮಾಡಿ ಬಂದ, ಚಂದ್ರ ಊಟ ಮಾಡುವಾಗ ಎಲ್ಲೋ ಊಟದ ಸ್ವಲ್ಪ ತುಣಕುಗಳನ್ನು ತನ್ನ ಬೆರಳ ಸಂದಿಯಲ್ಲಿ ತರುತ್ತಾನೆ. ಅದರಿಂದ ತಾಯಿಗೆ ಸಂತೋಷವಾಗುತ್ತದೆ. ಆಗ ತಾಯಿ ಹೇಳುತ್ತಾಳೆ, ಸೂರ್ಯ ನೀನು ಉರಿಯುತ್ತಿರು, ಚಂದ್ರ ನೀ ತಂಪಾಗಿರು ಎನ್ನುತ್ತಾಳೆ. ಹಾಗೆಯೇ ಗಂಡ ಯುದ್ಧಕ್ಕೆ ಹೋಗಿದ್ದಾನೆ,  ಹೆಂಡತಿ ಒಬ್ಬಳೇ ಇದ್ದಾಳೆ, ಬೀಸಕ್ಕೆ ಕುಂತಾಗ ಗಂಡ ಸರದಾರ ಸರಗಿ ಮಾಡಿಸಿ ಕೊಟ್ಟಿದ್ದಾನೆ. ನಗಿ ನನಗ್ಯಾತಕೆ ಎಂದು ಬೀಸುತ್ತಾಳೆ.... ಹೀಗೆ ಅನೇಕ ಸಂದರ್ಭಗಳನ್ನು ವಿವರಿಸಿದರು.
ನಮಗೆ ನಮ್ಮ ಮನೆಯ ಹಿಂದಿನ ಹಿತ್ತಲಿನ ಪರಿಚಯವೇ ಇಲ್ಲ. ಆದರೆ ನಾವು ವಿಶ್ವವನ್ನೇ ಪರಿಚಯಿಸಲು  ಹೊರಡುತ್ತೇವೆ. ಇಂದು ನಾವು ನಮ್ಮ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಸತ್ತಾಗ ಭರ್ಜರಿ ಊಟ  ಹಾಕಿಸಿ ಹಬ್ಬ ಆಚರಿಸುತ್ತೇವೆ. ಆದರೆ ಜಾನಪದರು ತಂದೆ ತಾಯಿಯರ ಬಗ್ಗೆ ಗೌರವ ಮತ್ತು ಪೂಜ್ಯ ಭಾವನೆ ಹೊಂದಿದ್ದರು ಎಂದು ಹೇಳಿದರು.  
ಪ್ರೊ.ಎಚ್. ರಾಚಪ್ಪ, ಡಿ. ಮಂಜುನಾಥ, ಆರ್. ರತ್ನಯ್ಯ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement