ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ
ಕ.ಪ್ರ. ವಾರ್ತೆ , ಸೊರಬ , ಮಾ.24
ಪಟ್ಟಣದ ಮುಖ್ಯರಸ್ತೆಯಲ್ಲಿನ ಹಳೇ ಪೊಲೀಸ್ ಠಾಣೆ ಪಕ್ಕದಲ್ಲಿ ಆಳವಾದ ಗುಂಡಿಗೆ ಬಿದ್ದು ಬಾಲಕನೋರ್ವನು ಗಾಯಗೊಂಡಿದ್ದಾನೆ.
ಪಟ್ಟಣದ ನೀರು ಸರಬರಾಜು ಪೈಪ್ ಪೊಲೀಸ್ ಠಾಣೆ ಪಕ್ಕದ ಮನೆ ಎದುರು ಹಾದು ಹೋಗಿದ್ದು, ಈಚೆಗೆ ಪೈಪ್ ದುರಸ್ಥಿ ಮಾಡಲೆಂದು ಆಳವಾದ ಗುಂಡಿ ತೆಗೆದು ಮುಚ್ಚದೆ ಹಾಗೆ ಬಿಡಲಾಗಿದೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಗುಂಡಿ ತೆಗೆದಿರುವಲ್ಲಿ ವಾಸದ ಮನೆಯಿದ್ದು, ಅವರಿಗೆ ನೇರ ಪ್ರವೇಶವಿಲ್ಲ, ಪ್ರತಿ ದಿನ ಹಿಂಬಾಗಿಲಿನಿಂದ ಮನೆ ಪ್ರವೇಶಿಸಬೇಕಿದೆ. ಮುಖ್ಯರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ತುಸು ವಿವಾದ ಇರುವುದರಿಂದ ಮುಖ್ಯರಸ್ತೆ ಸ್ಥಿತಿ ತೀರಾ ಹದಗೆಟ್ಟಿದೆ. ಹೀಗಿರುವಾಗ ರಸ್ತೆ ಬದಿಯಲ್ಲಿಯೇ ಈ ರೀತಿ ಆಳವಾದ ಗುಂಡಿ ತೆರೆದಿರುವುದು ಅಪಘಾತಕ್ಕೆ ಆಹ್ವಾನವಿತ್ತಂತಾಗಿದೆ.
ಪ್ರಸ್ತುತ ಪಪಂ ಆಡಳಿತ ಚಾಲ್ತಿಯಲಿಲ್ಲ. ಆದರೆ, ಆಡಳಿತಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಾವು ನೋವು ಸಂಭವಿಸುವ ಮುನ್ನ ಆಡಳಿತಾಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.