ಎನ್ನೆಸ್ಸೆಸ್ ವಾರ್ಷಿಕ ಶಿಬಿರ
ಕ.ಪ್ರ ವಾರ್ತೆ , ಕಡೂರು , ಮಾ.24
ತಾಲೂಕಿನ ಯಗಟಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಸಮೀಪದ ಯಗಟಿಪುರ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮ ನಡೆಯಿತು.
ಶಿಬಿರದಲ್ಲಿ ಪಂಚನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಕುಮಾರರ್ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸೇವೆಯ ಮೂಲಕ ಶಿಕ್ಷಣ ನೀಡುವುದೇ ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪರಸ್ಪರ ಒಬ್ಬರನ್ನೊಬ್ಬರು ಅರಿತು ಸಾಮರಸ್ಯದ ಜೀವನ ನಡೆಸಲು ಎನ್ನೆಸ್ಸೆಸ್ ಸಹಕಾರಿಯಾಗಿದೆ ಎಂದು ಹೇಳಿ ವಿದ್ಯಾರ್ಥಿಗಳು ಈ ಸೇವಾ ಯೋಜನೆಯ ಮಹತ್ವ ತಿಳಿದು ಅರಿತಲ್ಲಿ ಮುಂದೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದರು.
ಯಗಟಿ ಗ್ರಾಮದ ವಚನ ಸಾಹಿತ್ಯ ಪರಿಷತ್ ಸದಸ್ಯ ಶಾಂತಕುಮಾರ್ ಮಾತನಾಡಿ, ಇಂದು ಪ್ರಾಮಾಣಿಕತೆ ಮತ್ತು ನೈತಿಕತೆಯಿಂದ ಸಮಾಜ ದೂರವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಂಥಪಾಲಕ ಎಂ. ಉಮೇಶ್ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಚ್.ಎಸ್. ವಿರೂಪಾಕ್ಷಪ್ಪ, ಸಹಾಯಕ ಪ್ರಾಧ್ಯಾಪಕ ದುರ್ಗಪ್ಪ, ನಾಗೇಂದ್ರಪ್ಪ, ಸಿಬ್ಬಂದಿ, ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.