ಕಾರ್ಗಲ್,ನಲ್ಲಿ ಚೌಡೇಶ್ವರಿ ದೇವಿ ವರ್ಧಂತಿ ಉತ್ಸವ
ಕ.ಪ್ರ ವಾರ್ತೆ, ಜೋಗ್,ಫಾಲ್ಸ್, ಮಾ.24
ಕಾರ್ಗಲ್,ನ ಚೌಡೇಶ್ವರಿ ದೇವಾಲಯದ 15ನೇ ವರ್ಷದ ವರ್ಧಂತಿ ಉತ್ಸವ ಮತ್ತು 4ನೇ ವರ್ಷದ ರಥೋತ್ಸವ ಇದೇ ತಿಂಗಳ 28ರಿಂದ 30ರವರೆ ವಿಜೃಂಭಣೆಯಿಂದ ನಡೆಯಲಿದೆ. ಸಕಲ ತಯಾರಿಗಳು ಭರದಿಂದ ಸಾಗಿದೆ ಎಂದು ಶ್ರೀ ಚೌಡೇಶ್ವರಿ ಪ್ರತಿಷ್ಠಾನದ ಸದಸ್ಯ ಶ್ರೀನಿವಾಸ್.ಎಂ.ಪೈ ತಿಳಿಸಿದರು.
ಅವರು ಕಾರ್ಗಲ್,ನ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ವಿದ್ಯಾಧಿರಾಜ ಶ್ರೀಪಾದ ವಡೇರ್ ಸ್ವಾಮೀಜಿಯವರ ಭವ್ಯ ಆಗಮನ ಮತ್ತು ವಾಸ್ತವ್ಯದೊಂದಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 3 ದಿನಗಳೂ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ದಿನಂಪ್ರತಿ 5000 ಭಕ್ತಾಧಿಗಳು ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
28ರಂದು ದೇವರಿಗೆ ಸರ್ವಾಲಂಕಾರ ಪೂಜೆ, ಸಂಜೆ 7 ಗಂಟೆಗೆ ವಿದ್ಯಾಧಿರಾಜ ಶ್ರೀಪಾದ ವಡೇರ್ ಸ್ವಾಮೀಜಿಯವರನ್ನು ದೇವಾಲಯದ ಮಹಾದ್ವಾರದ ಬಳಿ ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳುವುದರ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಸಂಜೆ ಬೆಂಗಳೂರಿನ ಖ್ಯಾತ ಗಾಯಕಿ ಎಂ.ಡಿ. ಪಲ್ಲವಿ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
29ರಂದು ದೇವರಿಗೆ ಕುಂಭಾಭಿಷೇಕ, ಸಾಮೂಹಿಕ ಗಣಹೋಮ, ಸಂಜೆ 7 ಗಂಟೆಗೆ ಶ್ರೀಗಳ ಅಮೃತ ಹಸ್ತದಿಂದ ದೇವರ ಉತ್ಸವಮೂರ್ತಿಯ ರಥಾರೋಹಣ ನಂತರ ರಥೋತ್ಸವ ನಡೆಯಲಿದೆ. ನಂತರ ಸ್ವಾಮೀಜಿಯವರಿಗೆ ಪ್ರತಿಷ್ಠಾನದಿಂದ ಪಾದಪೂಜೆ ಮತ್ತು ಆಶೀರ್ವಚನ ಕಾರ್ಯಕ್ರಮ ಜರುಗಲಿದೆ.
ರಾತ್ರಿ 9.30ಕ್ಕೆ ಕುಂಭಾಶಿಯ ಪೂರ್ಣಚಂದ್ರ ಯಕ್ಷ ಪ್ರತಿಷ್ಠಾನದಿಂದ ರತ್ನಾವತಿ ಕಲ್ಯಾಣ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ.
30ರಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀ ಪಾದಂಗಳವರಿಗೆ ಪ್ರತಿಷ್ಠಾನದ ವತಿಯಿಂದ ಪಾದಪೂಜೆ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಲಿದೆ
ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ವಿನೋದ್.ಎಸ್. ಮಹಾಲೆ, ಶಿವಾನಂದ್ ಪ್ರಭು, ಸತೀಶ್ ಮಹಾಲೆ ಹಾಜರಿದ್ದರು.