ಮಂಕಾಗಿದ್ದ ಬಿಜೆಪಿಗೆ ಶಕ್ತಿ ತುಂಬಿದ ನಾಯಕರು
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.24
ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಿಟ್ಟಾಗಿನಿಂದಲೂ ಮಂಕಾಗಿದ್ದ ಜಿಲ್ಲಾ ಬಿಜೆಪಿಯ ಮೊಗದಲ್ಲೀಗ ಕುರುಕ್ಷೇತ್ರದಲ್ಲಿ ಯುದ್ಧ ಮಾಡುವ ರಣೋತ್ಸಾಹ.
ಈ ರೀತಿ ಚಿತ್ರಣವನ್ನು ಬದಲು ಮಾಡಿದ್ದು ಬಿಜೆಪಿಯ ಅಗ್ರ ನಾಯಕರು. ಜೊತೆಗೆ ಯಡಿಯೂರಪ್ಪನವರನ್ನು ಹೆಣೆಯಲು ಬೇಕಾದ ಅಗತ್ಯ ಸರಕುಗಳನ್ನು ಕಾರ್ಯಕರ್ತರಿಗೆ, ಸ್ಥಳೀಯ ಮುಖಂಡರಿಗೆ ಒದಗಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ ಅಸ್ತ್ರ ಪೂರೈಸುವ ವೇದಿಕೆಯಾಯಿತು.
ರಣೋತ್ಸಾಹ: ಈಶ್ವರಪ್ಪನವರ ರಣೋತ್ಸಾಹ ಮಾತುಗಳು, ಮಾರ್ಮಿಕವಾದ ಪ್ರಹ್ಲಾದ್ ಜೋಷಿ ನುಡಿಮುತ್ತುಗಳು, ಅನಂತ ಕುಮಾರ್ ಅವರ ನೇರ ವಾಗ್ಝರಿ, ಆಯನೂರು ಮಂಜುನಾಥ್ ವ್ಯಂಗ್ಯದ ದಾಟಿಯಲ್ಲಿ ತಿವಿ ಮಾತುಗಳು ಕಾರ್ಯಕರ್ತರನ್ನು ಬಡಿದೆಬ್ಬಿಸಿದ್ದಂತೂ ಸುಳ್ಳಲ್ಲ.
ಯಡಿಯೂರಪ್ಪ ಪಕ್ಷ ಬಿಟ್ಟಿದ್ದು, ನಂತರ ಹೊಸ ಪಕ್ಷ ರಚನೆಯಿಂದ ಹಿಡಿದು ಇತ್ತೀಚಿನ ಸ್ಥಳೀಯ ಸಂಸ್ಥೆಯವರೆಗೆ ಮಂಕಾಗಿ ತೊಳಲಾಟದಲ್ಲಿಯೇ ಇದ್ದ ಬಿಜೆಪಿ ಕಾರ್ಯಕರ್ತರು ಈಗ ಎದ್ದು ಕುಳಿತಿದ್ದಾರೆ. ಮೈಚಳಿ ಬಿಟ್ಟು ಮಾತನಾಡಲಾರಂಭಿಸಿದ ತಮ್ಮದೇ ಮುಖಂಡರನ್ನು ಕಂಡು ಒಂದಿನಿತು ತಬ್ಬಿಬ್ಬೂ ಆಗಿದ್ದಾರೆ.
ಕಾರ್ಯಕರ್ತರಿಗೆ ಟಾನಿಕ್: ವೇದಿಕೆಯಲ್ಲಿದ್ದವರೆಲ್ಲರೂ ಯಡಿಯೂರಪ್ಪನವರ ಸಹ ವರ್ತಿಗಳು, ಶಿಷ್ಯರೇ ಆಗಿದ್ದರು. ಒಂದು ಕಾಲದಲ್ಲಿ ಯಡಿಯೂರಪ್ಪನವರ ಆದೇಶವನ್ನು ಅನೂಚಾನೂಚವಾಗಿ ಪಾಲಿಸುತ್ತಾ ಬಂದಿದ್ದವರು. ಆದರೆ, ವಿಜಯ ಸಂಕಲ್ಪ ಯಾತ್ರೆಯ ವೇದಿಕೆಯಲ್ಲಿ ಮೈಮೇಲೆ ಆವಾಹನೆಯಾದಂತೆ ಕಂಡುಬಂದ ನಾಯಕರು ಯಡಿಯೂರಪ್ಪನವರನ್ನು ಹಿಗ್ಗಾಮುಗ್ಗ ಝಾಡಿಸಿದರು. ಇದು ಪಕ್ಷದ ಕಾರ್ಯಕರ್ತರಿಗೆ ಒಂದು ರೀತಿಯಲ್ಲಿ ಟಾನಿಕ್,ನಂತೆಯೇ ಆಯಿತು.
ವೇದಿಕೆಯಿಂದ ಹೊರಟ ದನಿ
1. ಯಡಿಯೂರಪ್ಪನವರು ಪಕ್ಷ ಬಿಡಲು ಬಿಜೆಪಿ ಕಾರಣವಲ್ಲ, ಪಕ್ಷ ಒಡೆಯಲು ಪಕ್ಷದ ನಾಯಕರು ಕಾರಣವಲ್ಲ ಎಂಬುದನ್ನು ಗಟ್ಟಿದನಿಯಲ್ಲಿ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಯಿತು.
2. ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರ ಪ್ರಕರಣಕ್ಕೂ ತಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹಾಗೂ ಕುಟುಂಬಕ್ಕೆ ಸಂಬಂಧಪಟ್ಟ ವಿಚಾರ ಎಂಬುದನ್ನು ಒತ್ತಿ ಹೇಳುವ ಪ್ರಯತ್ನ.
3. ಕಳೆದ ಐದು ವರ್ಷದಲ್ಲಾದ ಅಭಿವೃದ್ಧಿ ಕಾರ್ಯ, ವಿವಿಧ ಸಮಾಜಕ್ಕೆ ಮಾಡಿಕೊಟ್ಟ ಉಪಯೋಗ ಪಕ್ಷದ್ದೇ ಹೊರತು ಯಡಿಯೂರಪ್ಪನವರದ್ದಲ್ಲ ಎಂಬ ಅಂಶ.
4. ಬಿಎಸ್,ವೈ ಹಾಗೂ ಕಾಂಗ್ರೆಸ್ ನಡುವೆ ಸಂಬಂಧವಿದೆ ಎಂದು ಪದೇ ಪದೇ ಹೇಳುವ ಪ್ರಯತ್ನದ ಮುಂದುವರಿದ ಭಾಗ.
5. ಶಿಕಾರಿಪುರದಲ್ಲೇ ಗೆದ್ದು ಬನ್ನಿ ಎಂದು ಸವಾಲೆಸೆಯುವ ಮೂಲಕ ಬಿಎಸ್,ವೈ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ.
6. ಬಿಎಸ್,ವೈ ಇಲ್ಲದೆ ಕೂಡ ನಾಯಕರ ದಂಡು ಪಕ್ಷದಲ್ಲಿದೆ ಎಂದು ತಿಳಿಹೇಳುವ ಪ್ರಯತ್ನ.
7. ಡೋಲಾಯಮಾನದಲ್ಲಿರುವವವರಿಗೆ ಚುನಾವಣೆ ಎದುರಿಸಲು ಬಿಎಸ್,ವೈಗೆ ಕಷ್ಟವಿದೆ ಎಂದು ಮನವರಿಕೆ ಮಾಡುವ ತಂತ್ರ.
ಒಟ್ಟಾರೆ, ಬಿಜೆಪಿಯಲ್ಲಿರುವವರಿಗೆ, ಕೆಜೆಪಿಯತ್ತೆ ಒಂದು ಮನಸ್ಸು ಮಾಡಿದವರಿಗೆ, ಮತದಾರನಿಗೆ ಎಲ್ಲರಿಗೂ ಒಂದು ಸಂದೇಶ ಕೊಡುವ ಪ್ರಯತ್ನ ವೇದಿಕೆಯಿಂದ ನಡೆಯಿತು. ಅದಕ್ಕಿಂತ ಮುಖ್ಯವಾಗಿ ಬಿಎಸ್,ವೈ ಮತ್ತು ಅವರ ಬೆಂಬಲಿಗರಿಗೆ ತಮ್ಮ ಶಕ್ತಿಯ ಅನಾವರಣ ಮಾಡಿಕೊಡುವ ಅವಕಾಶಕ್ಕೆ ಇದು ವೇದಿಕೆಯಾಯಿತು.
- ಶ್ರೀಕಾಂತ ಭಟ್