ಈಶ್ವರಪ್ಪ, ತಿಮ್ಮಪ್ಪ ಒಳಒಪ್ಪಂದ: ಆರೋಪ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.25 ಬಿಜೆಪಿಯ ಕೆ.ಎಸ್. ಈಶ್ವರಪ್ಪ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಪರಸ್ಪರ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಡೆಮಾಕ್ರಟಿಕ್ ಪಾರ್ಟಿ ರಾಜ್ಯಾಧ್ಯಕ್ಷ ಕೆ.ಎಲ್. ಭೋಜರಾಜ್ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ದುರ್ಬಲ ವ್ಯಕ್ತಿಯನ್ನು ಕಣಕ್ಕಿಳಿಸುವ ಬಗ್ಗೆ ಈ ನಾಯಕರು ಒಳಒಪ್ಪಂದ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಕಾಗೋಡು ತಿಮ್ಮಪ್ಪ ಅವರ ಶಿಕ್ಷಣ ಸಂಸ್ಥೆಗೆ 1.30 ಎಕರೆ ಭೂಮಿಯನ್ನು ಮಂಜೂರು ಮಾಡಿದೆ ಎಂದು ಆರೋಪಿಸಿದರು.
ಅಕ್ರಮ ಮದ್ಯದಂಗಡಿ: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಕ್ರಮವಾಗಿ ಮದ್ಯಗಂಡಿಗಳು ತಲೆ ಎತ್ತುತ್ತಿದ್ದು, ಸಕ್ರಮ ಮದ್ಯದಂಗಡಿಗಳು ಕೂಡ ಸರ್ಕಾರದ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ. ರಾತ್ರಿ 10 ಗಂಟೆಗೆ ಮುಚ್ಚಬೇಕೆಂಬ ನಿಯಮವಿದ್ದರೂ ತಡರಾತ್ರಿ 12 ಗಂಟೆವರೆಗೂ ವ್ಯಾಪಾರ ಮಾಡುತ್ತಿವೆ. ಅಲ್ಲದೆ, ಚಿಲ್ಲರೆಯಾಗಿಯೂ ಮದ್ಯ ಮಾರಾಟ ಮಾಡುತ್ತಿವೆ ಎಂದು ಆಪಾದಿಸಿದರು.
ಐಡಿಪಿಯ ಪ್ರಧಾನ ಕಾರ್ಯದರ್ಶಿ ಎನ್. ಮೇಘರಾಜ್, ಸಂಚಾಲಕ ಎನ್.ಜೆ. ಕುಲಕರ್ಣಿ, ನಾಗಪ್ಪ ಮೊದಲಾದವರು ಇದ್ದರು.