ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.25
ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಾಗಲಿ, ಅರ್ಹತೆಯಾಗಲಿ ಬಿಜೆಪಿ ಮುಖಂಡರಿಗಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸೇವಾದಳ ಸಮನ್ವಯ ಸಮಿತಿ ಸದಸ್ಯ ವೈ.ಎಚ್.ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಚುನಾವಣಾ ಸಮಾವೇಶದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಹಾಗೂ ಪಕ್ಷದ ನಾಯಕರ ಬಗ್ಗೆ ಮಾತನಾಡಿದ್ದಾರೆ. ಈ ರೀತಿ ಮಾತನಾಡುವ ಯಾವುದೇ ನೈತಿಕತೆಯಾಗಲಿ, ಅರ್ಹತೆಯಾಗಲಿ ಬಿಜೆಪಿ ಪಕ್ಷದ ಮುಖಂಡರಿಗಿಲ್ಲವಾಗಿದೆ. ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಆ ಪಕ್ಷದ ಮುಖಂಡರು ಕಳೆದುಕೊಂಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತ ವೈಖರಿಯ ಸಾಕ್ಷತ್ ದರ್ಶನ ರಾಜ್ಯದ ಜನತೆಗಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಹಿಂದೆಂದೂ ಕಾಣದ ಭ್ರಷ್ಟಾಚಾರ, ಹಗರಣ, ಅನೈತಿಕ ರಾಜಕಾರಣಕ್ಕೆ ಸಾಕ್ಷಿಯಾಯಿತು.
ಇಡೀ ರಾಷ್ಟ್ರದಲ್ಲಿ ತತ್ವಾಧಾರಿತ ರಾಜಕಾರಣದ ಮೂಲಕ ಉತ್ತಮ ಹೆಸರು ಗಳಿಸಿದ್ದ ಕರ್ನಾಟಕ ರಾಜ್ಯದ ಕೀರ್ತಿಯನ್ನು ಬಿಜೆಪಿ ಸರ್ಕಾರ ಸಂಪೂರ್ಣ ಹಾಳುಗೆಡವಿತು ಎಂದು ನಾಗರಾಜ್ ಟೀಕಿಸಿದ್ದಾರೆ.
ಇನ್ನೂ ಮುಂದಾದರು ಬಿಜೆಪಿ ಮುಖಂಡರು ಇನ್ನೊಂದು ಪಕ್ಷದ ವಿರುದ್ಧ ಆರೋಪ ಮಾಡುವ ಮುನ್ನ ತಾವು ಯಾವ ಸ್ಥಾನದಲ್ಲಿದ್ದೇವೆ ಎಂಬುವುದನ್ನು ಅರಿತು ಮಾತನಾಡಬೇಕು.
ಇದೇ ರೀತಿ ಮುಂದಿನ ದಿನಗಳಲ್ಲಿ ಮಾತನಾಡಿದರೆ ರಾಜ್ಯದ ಜನತೆಯ ಮುಂದೆ ನಗೆಪಾಟಲಿಗೀಡಾಗಬೇಕಾಗುತ್ತದೆ ಎಂದು ನಾಗರಾಜ್ ಅವರು ತಿಳಿಸಿದ್ದಾರೆ.