ಕುವೆಂಪು ವಿವಿ: 13.08 ಕೋಟಿ ಕೊರತೆ ಬಜೆಟ್ ಮಂಡನೆ
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.25
ಕುವೆಂಪು ವಿಶ್ವವಿದ್ಯಾಲಯದ ಮುಂದಿನ ಸಾಲಿನ ಆಯವ್ಯಯ ಸೋಮವಾರ ಮಂಡನೆಯಾಗಿದ್ದು, 13.08 ಕೋಟಿ ಕೊರತೆ ಬಜೆಟ್ ಇದಾಗಿದೆ.
2013-14ನೇ ಸಾಲಿಗೆ ಯೋಜನಾ ಹಾಗೂ ಯೋಜನೇತರ ವೆಚ್ಚದಿಂದ ಒಟ್ಟು 899.91 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಯೋಜನೆ ಹಾಗೂ ಯೋಜನೇತರ ವೆಚ್ಚಗಳಿಗಾಗಿ 103.07 ಕೋಟಿ ನಿಗದಿಪಡಿಸಲಾಗಿದೆ. 13.08 ಕೋಟಿ ಕೊರತೆ ಬೀಳಲಿದೆ.
ಕುವೆಂಪು ವಿವಿಯ ಪ್ರೊ.ಎಸ್.ಆರ್. ಹಿರೇಮಠ್ ಸಭಾಂಗಣದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ವಿದ್ಯಾವಿಷಯಕ ಪರಿಷತ್ತಿನ ಸಭೆಯಲ್ಲಿ ವಿವಿಯ ಹಣಕಾಸು ಅಧಿಕಾರಿ ಪ್ರೊ.ಆರ್. ಹಿರೇಮಣಿ ನಾಯ್ಕ್ 2013-14ನೇ ಸಾಲಿನ ಬಜೆಟ್ ಮಂಡಿಸಿದರು.
ಶೈಕ್ಷಣಿಕ ವೆಚ್ಚಗಳಿಗೆ 38.16 ಕೋಟಿ, ಅಭಿವೃದ್ಧಿ ಕಾರ್ಯಗಳಿಗೆ 8 ಕೋಟಿ, ಆಡಳಿತಾತ್ಮಕ ವೆಚ್ಚಗಳಿಗೆ 25.45 ಕೋಟಿ, ವಿದ್ಯಾರ್ಥಿ ಬೆಂಬಲ ಸೇವೆಗಳಿಗಾಗಿ 3.53 ಕೋಟಿ, ಪರೀಕ್ಷಾ ವೆಚ್ಚಗಳಿಗೆ 13 ಕೋಟಿ, ದೂರ ಶಿಕ್ಷಣ ನಿರ್ದೇಶನಾಲಯದ ವೆಚ್ಚಗಳಿಗೆ 9 ಕೋಟಿ ಹಾಗೂ ವಿವಿಯ ರಜತ ಮಹೋತ್ಸವ ಕಾರ್ಯಕ್ರಮಗಳಿಗೆ 25 ಲಕ್ಷವನ್ನು ಬಜೆಟ್ ಮೀಸಲಿಡಲಾಗಿದೆ.