ಗೆಲುವು ಸಾಧಿಸಲು ಆತ್ಮವಿಶ್ವಾಸ ಮುಖ್ಯ
ಕ.ಪ್ರ.ವಾರ್ತೆ, ಸಾಗರ, ಮಾ.25
ಮನುಷ್ಯನಿಗೆ ಆತ್ಮವಿಶ್ವಾಸವೇ ಮುಖ್ಯವಾಗಿದ್ದು, ಆತ್ಮವಿಶ್ವಾವಿದ್ದವನು ಬದುಕಿನಲ್ಲಿ ಯಶಸ್ವಿಯಾಗುತ್ತಾನೆ ಎಂದು ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಗಾಂಧಿನಗರದಲ್ಲಿ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಪೂಜೆ, ಮಂತ್ರ ತಂತ್ರದಿಂದ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ನಮ್ಮ ಮೇಲೆ ನಮಗಿರುವ ವಿಶ್ವಾಸ ಹಾಗೂ ಧಾರ್ಮಿಕ ಅನುಷ್ಠಾನದ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿದೆ. ದೇವರ ಪೂಜೆ ಮಾಡುವಾಗಲೂ ನಮ್ಮದೊಂದಿಷ್ಟು ಬೇಡಿಕೆ ಈಡೇರಿಸುವಂತೆ ಕೋರುತ್ತೇವೆ. ನಿಸ್ವಾರ್ಥವಾಗಿ ದೇವರ ಸನ್ನಿಧಿಗೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕ ಎಸ್.ಪಿ. ಶೇಷಗಿರಿ ಭಟ್, ನಮ್ಮೆಲ್ಲ ಕೆಲಸಗಳು, ಸೇವೆಗಳ ಹಿಂದೆ ಸ್ವಾರ್ಥ ಇರಬಾರದು. ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ಶ್ರೇಷ್ಠವಾದುದು. ಪ್ರತಿಯೊಂದು ಕೆಲಸಕ್ಕೂ ಗುರು ಹಾಗೂ ಗುರಿ ಇರಬೇಕು ಎಂದು ಹೇಳಿದರು. ದಾನಿ ಎ.ಎನ್. ವೆಂಕಟಕೃಷ್ಣ ಮತ್ತಿತರರು ಹಾಜರಿದ್ದರು.