ಜನರ ತೀರ್ಮಾನಕ್ಕೆ ತಲೆ ಬಾಗಲೇಬೇಕು: ಕುಮಾರ
ಕ.ಪ್ರ.ವಾರ್ತೆ, ಸೊರಬ, ಮಾ.25 ಸೋಲು ಗೆಲವು ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡುವ ತೀರ್ಮಾನಕ್ಕೆ ತಲೆ ಬಾಗಬೇಕು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸೋಲನ್ನು ಮರೆತು ಮುಂದಿನ ಗೆಲವಿನ ತಯಾರಿಯನ್ನು ಗುರಿಯನ್ನಾಗಿಸಿಕೊಂಡು ಶ್ರಮಿಸುವ ನಿಸ್ವಾರ್ಥ ಕ್ರಿಯಾಶೀಲತೆ ಕಾರ್ಯಕರ್ತ, ಮುಖಂಡರದ್ದಾಗಬೇಕು. ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಅಲೆ ಎದ್ದಿದ್ದು, ಸೊರಬದಲ್ಲೂ ಪ್ರೋತ್ಸಾಹದಾಯಕ ವಾತಾವರಣ ನಿಚ್ಚಳವಾಗಿ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ಧನಾತ್ಮಕ ಚಿಂತನೆಯನ್ನು ಪ್ರಧಾನವನ್ನಾಗಿಸಿಕೊಂಡು ಗೆಲುವಿನಿಂದ ಇರಬೇಕು ಎಂದರು.
ಚುನಾವಣಾ ಅಸ್ತ್ರ: ದಂಡಾವತಿ ಯೋಜನೆ ಬಿಜೆಪಿಯ ಚುನಾವಣಾ ಅಸ್ತ್ರವಷ್ಟೇ. ಇಂದು ಯಾರನ್ನೂ ಮುಳುಗಿಸದೆ ವರದಾ ನದಿಗೆ ನಿರ್ಮಿಸಿದ ಬ್ಯಾರೇಜ್‌ಗಳು ಜಡೆ ಹೋಬಳಿಯ ಅನೇಕ ಹಳ್ಳಿಗಳಿಗೆ ನೀರಾವರಿಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂಬುದನ್ನು ಗಮನಿಸಬೇಕು ಎಂದರು.
ಜಾತ್ಯತೀತತೆಯ ಮುಖವಾಡ ಧರಿಸಿ, ಬಿಜೆಪಿಯೊಂದಿಗೆ ಕೈಜೋಡಿಸುವ ಜೆಡಿಎಸ್‌ಗೆ ತಾವು ಯಾರ, ಯಾವ ತತ್ವ ಸಿದ್ಧಾಂತಡಿಯಲ್ಲಿ ರಾಜಕಾರಣ ಮಾಡುತ್ತಿದ್ದೇವೆ ಎನ್ನುವ ಅರಿವಿಲ್ಲ, ಕಳೆದ 10 ವರ್ಷಗಳಲ್ಲಿ ಬೆರಳೆಣಿಕೆ ಸ್ಥಾನ ಪಡೆದ ಜೆಡಿಎಸ್‌ನಿಂದ ರಾಜ್ಯ ರಾಜಕಾರಣ, ಪ್ರಜಾಪ್ರಭುತ್ವದ ಮೂಲೋದ್ದೇಶವೇ ಮಣ್ಣು ಪಾಲಾಗಿವೆ. ಹಾಗಾಗಿ ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದರು.
ಪಕ್ಷದ ಬ್ಲಾಕ್ ಅಧ್ಯಕ್ಷ ಮಂಜುನಾಥ್, ತಾಪಂ ಸದಸ್ಯ ಕೆ. ಅಜ್ಜಪ್ಪ, ಸಾಗರ ಎಪಿಎಂಸಿನ ಮಾಜಿ ಅಧ್ಯಕ್ಷ ಮಂಡಗಳಲೆ ಹುಚ್ಚಪ್ಪ, ಟೌನ್ ಅಧ್ಯಕ್ಷ ಬಂದಗಿ ಬಸವರಾಜ ಶೇಠ್, ಪಪಂ ಸದಸ್ಯ ಎಂ.ಡಿ. ಉಮೇಶ್, ಮಂಚಿ ಹನುಮಂತಪ್ಪ, ಹಿಂದುಳಿದ ವರ್ಗ ಪಂಗಡಗಳ ಸೆಲ್ ಅಧ್ಯಕ್ಷ ರೇವಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮಧುಕೇಶ್ವರ್, ಮುಖಂಡರಾದ ಸತೀಶೆ ಹೆಗಡೆ, ತಾವರಳ್ಳಿ ಬಸವರಾಜಗೌಡ, ಯೂಸೂಫ್ ಸಾಬ್, ರಾಜು ಗೌಡ, ಹೆಚ್ಚೆ ಜಯಶೀಲ ಮುಂತಾದವರು ಇದ್ದರು.