ಮನೆಗೇ ಬರಲಿದೆ ಮಿನಿ ಎಪಿಕ್ ಕಾರ್ಡ್
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.25
ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತಗಟ್ಟೆಯ ಎದುರು ಶಾಮಿಯಾನ ಹಾಕಿಕೊಂಡು ಬೂತ್ ಸ್ಲಿಪ್ ನೀಡುವ ಸೀನ್ ಇಲ್ಲ. ಆ ಕೆಲಸವನ್ನು ಜಿಲ್ಲಾಡಳಿತವೇ ಮಾಡಲಿದೆ.
ಈ ಬಾರಿ ಮತದಾರರು ಜಿಲ್ಲಾಡಳಿತವೇ ನೀಡುವ ಮಿನಿ ಎಪಿಕ್ ಕಾರ್ಡ್ನ್ನು ಮತಗಟ್ಟೆಗೆ ತಂದರೆ ಸಾಕು. ಅವರು ಮತ ಚಲಾವಣೆ ಮಾಡಬಹುದು. ಅಕಸ್ಮಾತ್ ಈ ಮಿನಿ ಎಪಿಕ್ ಕಾರ್ಡ್ನಲ್ಲಿ ಫೋಟೋ ಇಲ್ಲದಿದ್ದರೆ ತಮ್ಮ ಭಾವಚಿತ್ರವಿರುವ ಬೇರೆ ಯಾವುದೇ (ಚುನಾವಣಾ ಆಯೋಗ ನಿಗದಿಪಡಿಸಿದ) ಗುರುತಿನ ಚೀಟಿ ಹಾಜರುಪಡಿಸಿದರೆ ಸಾಕು.
ಈ ಮಿನಿ ಎಪಿಕ್ ಕಾರ್ಡ್ನ್ನು ಮತದಾನಕ್ಕೆ ಮೂರು ದಿನ ಮುಂಚೆ ಜಿಲ್ಲಾಡಳಿತವೇ ಮತದಾರರ ಮನೆಮನೆಗೆ ತಲುಪಿಸಲಿದೆ. ಈ ಕಾರ್ಡ್ನಲ್ಲಿ ಮತದಾರರ ಹೆಸರು, ಭಾವಚಿತ್ರ, ಮತಗಟ್ಟೆ ಸಂಖ್ಯೆ, ಮತದಾರರ ಸಂಖ್ಯೆ ಇರುತ್ತದೆ. ಇಷ್ಟಕ್ಕೂ ಮೀರಿ ಮಿನಿ ಎಪಿಕ್ ಕಾರ್ಡ್ ಸಿಗದಿದ್ದರೆ ಮತಗಟ್ಟೆಯ ಬಳಿ ಜಿಲ್ಲಾಡಳಿತವೇ ಒಂದು ಕಡೆ ಶಾಮಿಯಾನ ಹಾಕಿಕೊಂಡು ಕುಳಿತುಕೊಳ್ಳಲಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ರಾಜಕೀಯ ಪಕ್ಷಗಳ ಪ್ರಮುಖರ ಸಭೆಯಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ಈ ವಿಷಯತಿಳಿಸಿದರು.
ವ್ಯಾಪಕ ತಪಾಸಣೆ: ಹೆಲಿಕ್ಯಾಫ್ಟರ್, ಕಾರು ಸೇರಿದಂತೆ ಯಾವುದೇ ಮುಖಂಡರ ಯಾವುದೇ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಕಾರ್ಯಕರ್ತರು ಉದ್ವಿಗ್ನರಾಗದಂತೆ ಮುಖಂಡರು ಅವರಿಗೆ ತಿಳಿಹೇಳಬೇಕು ಎಂದು ಡಿಸಿ ಬನ್ಸಾಲ್ ಹೇಳಿದರು.
ಆಡಳಿತ ಪಕ್ಷದವರು ವಿಐಪಿಗಳು, ವಿರೋಧಪಕ್ಷದವರು ವಿಐಪಿ ಅಲ್ಲ ಎಂದು ಹೇಳಲು ಬರುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾರೂ ಸಹ ವಿಐಪಿ ಅಲ್ಲ. ಯಾರೇ ಆಗಲಿ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಜತೆಯಲ್ಲಿ ಕೊಂಡೊಯ್ಯುತ್ತಿದ್ದರೆ ಅದಕ್ಕೆ ಸಂಬಂಧಪಟ್ಟ ದಾಖಲೆಯನ್ನು ತಮ್ಮೊಂದಿಗೆ ಹೊಂದಿರಬೇಕು ಎಂದ ಅವರು, ಮುಖ್ಯಮಂತ್ರಿ ಅವರ ಹೆಲಿಕ್ಯಾಫ್ಟರನ್ನು ಭಾನುವಾರ ಅವರು ಸ್ವತಃ ಪರಿಶೀಲನೆ ನಡೆಸಿದ್ದನ್ನು ಜಿಲ್ಲಾಧಿಕಾರಿಯವರು ಈ ಸಂದರ್ಭದಲ್ಲಿ ಸಭೆಯ ಗಮನಕ್ಕೆ ತಂದರು.
ಎಲ್ಲಾ ರಾಜಕೀಯ ಪಕ್ಷಗಳ ಬಳಿ ಮತದಾರರ ಪಟ್ಟಿ ಇದ್ದು, ಯಾರೇ ಗಣ್ಯ ವ್ಯಕ್ತಿಗಳ ಹೆಸರು ಬಿಟ್ಟುಹೋಗಿದ್ದರೆ ಅದನ್ನು ಗಮನಿಸಿ ಸೇರಿಸುವ ಜವಾಬ್ದಾರಿ ನಿಮ್ಮದೇ ಎಂದು ಹೇಳಿದರು.
ಧ್ವನಿವರ್ಧಕ ಬಳಕೆ: ಪರೀಕ್ಷೆಗಳು ನಡೆಯುತ್ತಿರುವುದರಿಂದ ಏಪ್ರಿಲ್ 10ರ ವರೆಗೆ ಯಾವುದೇ ಕಾರಣಕ್ಕೂ ವಾಹನದಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶ ಮಾಡಿಕೊಡುವುದಿಲ್ಲ. ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಏ.10ರ ನಂತರ ಪರಿಸ್ಥಿತಿ ಅವಲೋಕನ ಮಾಡಿ ಅನುಮತಿ ನೀಡಲಾಗುವುದು ಎಂದ ಅವರು, ಎಲ್ಲಾ ಅನುಮತಿಗಳಿಗೂ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಸಿಇಓ ಸಸಿಕಾಂತ್ ಸೆಂಥಿಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.