ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಂಗಾಯಣ ನಿರ್ದೇಶಕರ ಪದಚ್ಯುತಿ: ಖಂಡನೆ

Rashmi Kasaragodu
Updated On : 26 Mar 2013, 10:19 am

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.25
ಮೈಸೂರು ರಂಗಾಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಅವರನ್ನು ಪದಚ್ಯುತಗೊಳಿಸಿರುವುದನ್ನು ಖಂಡಿಸಿ  ನಗರದ ರಂಗ ಕಲಾವಿದರು ಜಿಲ್ಲಾಡಳಿತಕ್ಕೆ ಸೋಮವಾರ ಸಂಜೆ ಮನವಿ ಸಲ್ಲಿಸಿದರು.
ರಂಗಭೂಮಿ ಒಂದು ಸೃಜನಶೀಲ ಕಲೆಯಾಗಿದೆ. ಇಲ್ಲಿ ಕೆಲಸ ಮಾಡುವುದಕ್ಕೆ ಸ್ವತಂತ್ರಹಾಗೂ ಪೂರಕ ವಾತಾವರಣ ಬೇಕು, ಬೆಂಬಲ ಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಾಯತ್ತ ಸಂಸ್ಥೆಯಾದ ರಂಗಾಯಣದಲ್ಲಿ  ಸರ್ಕಾರದ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಮೈಸೂರು ರಂಗಾಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಅವರನ್ನು ಆ ಸ್ಥಾನದಿಂದ ದಿಢೀರನೇ ಮುಕ್ತಗೊಳಿಸಿರುವುದು ಇದಕ್ಕೊಂದು ನಿದರ್ಶನ ಎಂದು ಕಲಾವಿದರು ಹೇಳಿದ್ದಾರೆ.
ಸಮರ್ಥ ಕಾರಣವಿಲ್ಲ: ರಂಗಾಯಣದ ನಿರ್ದೇಶಕರನ್ನು ವಜಾ ಮಾಡಿರುವುದು ಅನಪೇಕ್ಷಿತ ಬೆಳವಣಿಗೆ. ಮೈಸೂರು ರಂಗಾಯಣ ನಿರ್ದೇಶಕರನ್ನು ವಜಾ ಮಾಡಲು ಸಮರ್ಥ ಕಾರಣಗಳೇನೂ ಇಲ್ಲ. ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಅದನ್ನು ಪರಸ್ಪರ ಕುಳಿತು ಮಾತನಾಡಿ ಬಗಹರಿಸಿಕೊಳ್ಳಬೇಕೇ ಹೊರತು ವಜಾ ಮಾಡುವಂತಹ ಏಕಪಕ್ಷೀಯ, ಸರ್ವಾಧಿಕಾರಿ ನಿರ್ದಾರ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ತತ್ವಗಳಿಗೆ ಮಾರಕ. ರಂಗಭೂಮಿಯಂತಹ ಸೃಜನಶೀಲ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ವಿಪರೀತವಾಗಿದ್ದರೆ ರಂಗಭೂಮಿಯಲ್ಲಿ ಕೆಲಸ ಮಾಡುವುದು ಅಸಾಧ್ಯ.
ವಿಶ್ವರಂಗಭೂಮಿ ದಿನಾಚರಣೆ ಕೆಲವೇ ದಿನಗಳಿರುವಂತೆ ಸರ್ಕಾರ ಇಂತಹ ಕ್ರಮ ಕೈಗೊಂಡಿರುವುದು ಸರಿ ಅಲ್ಲ. ಆದ್ದರಿಂದ ಕೂಡಲೇ ಡಾ.ಬಿ.ವಿ. ರಾಜಾರಾಂ ಅವರನ್ನು ಮತ್ತೆ ರಂಗಾಯಣ ನಿರ್ದೇಶಕರಾಗಿ ನಿಯುಕ್ತಿಗೊಳಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಲಾವಿದರ ಒಕ್ಕೂಟದ ಅಧ್ಯಕ್ಷ  ಪ್ರೊ.ಎಸ್.ಸಿ. ಗೌರಿಶಂಕರ್, ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ರಂಗ ಕಲಾವಿದರಾದ ಹರಿಗೆ  ಗೋಪಾಲಸ್ವಾಮಿ, ಡಾ. ಸಾಸ್ವೆಹಳ್ಳಿ ಸತೀಶ್, ಮಧುಸೂದನ್ ಘಾಟೆ, ಅಣ್ಣಪ್ಪ ಒಂಟಮಾಳಗಿ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement