ಸರಳ ಸಾಮೂಹಿಕ ವಿವಾಹ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.25
ಹೆಣ್ಣು ಹೆತ್ತ ಪೋಷಕರಿಗೆ ಮದುವೆ ಎಂಬುವುದು ಕಬ್ಬಿಣದ ಕಡಲೆಯಾಗಿದೆ. ವರೋಪಚಾರ, ವರದಕ್ಷಿಣೆಯ ಭಾರದಿಂದ ನಲುಗಿ ಹೋಗುತ್ತಿದ್ದಾರೆ, ಈ ವ್ಯವಸ್ಥೆ ಬದಲಾಗಬೇಕಾಗಿದೆ ಎಂದು ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ಗಾಡಿಕೊಪ್ಪದ ಲಗನ ಕಲ್ಯಾಣ ಮಂದಿರದಲ್ಲಿ ನಂಜುಂಡಸ್ವಾಮಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಮೂರನೇ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದುವೆ ಎಂಬುವುದು ಅದ್ಧೂರಿ, ಆಡಂಬರ, ದುಂದು ವೆಚ್ಚದ ಸಂಕೇತವಾಗಿ ಮಾರ್ಪಟ್ಟಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ದುಬಾರಿಯಾಗಿ ಪರಿಣಮಿಸಿರುವ ದೈನಂದಿನ ಜೀವನ ವ್ಯವಸ್ಥೆಯಲ್ಲಿ ಬಡ, ಮಧ್ಯಮ ವರ್ಗದವರಿಗೆ ಮದುವೆ ಎಂಬುದು ದೊಡ್ಡ ಹೊರೆಯಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.
ಈ ಎಲ್ಲ ಸಮಸ್ಯೆಗಳಿಗೆ ಸಾಮೂಹಿಕ ವಿವಾಹ ಸೂಕ್ತ ಪರಿಹಾರವಾಗಿದೆ. ಸಂಘಸಂಸ್ಥೆಗಳು ಹೆಚ್ಚೆಚ್ಚು ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಬೇಕು. ಈ ಮೂಲಕ ಬಡ, ಮಧ್ಯಮ ವರ್ಗದವರಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ನಂಜುಂಡಸ್ವಾಮಿ ಪ್ರತಿಷ್ಠಾನದ ಕಾರ್ಯ ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಬಸವ ಕೇಂದ್ರದ ಮರುಳಸಿದ್ದ ಸ್ವಾಮೀಜಿ, ಪಚ್ಚೆ ನಂಜುಂಡಸ್ವಾಮಿ, ಮಾಜಿ ಶಾಸಕ ಜಿ. ಬಸವಣ್ಯಪ್ಪ, ರೈತ ಮುಖಂಡ ಕೆ.ಟಿ. ಗಂಗಾಧರ, ಕೆ. ಬೆನಕಪ್ಪ, ಉಮಾಪತಿಯಪ್ಪ, ಯಶವಂತರಾವ್ ಘೋರ್ಪಡೆ ಉಪಸ್ಥಿತರಿದ್ದರು.