ಸೀರೆಗೆ ಬೆಂಕಿ ತಗುಲಿ ಮಹಿಳೆ ಸಾವು
ಕ.ಪ್ರ.ವಾರ್ತೆ, ಭದ್ರಾವತಿ, ಮಾ. 25
ಪಟ್ಟಣದ ಹೊಸಮನೆಯ ನೀಲಮ್ಮ (45) ಶನಿವಾರ ಅಡುಗೆ ಮಾಡುತ್ತಿದ್ದಾಗ ಸೀರೆಗೆ ಬೆಂಕಿ ತಗುಲಿ ಸುಟ್ಟ ಗಾಯಗಳಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಹೊಸಮನೆ ಶಿವಾಜಿ ವೃತ್ತ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆತ್ಮಹತ್ಯೆ
ಪಟ್ಟಣದ ಬೋವಿ ಕಾಲೋನಿ ವಾಸಿ ಸೌಮ್ಯ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸಮನೆ ಶಿವಾಜಿ ವೃತ್ತದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೂಜಾಟ: ಬಂಧನ
ಇಲ್ಲಿಗೆ ಸಮೀಪದ ಅರಳಿಹಳ್ಳಿ ಗ್ರಾಮದ ಹನುಮಂತಪ್ಪನವರ ತೋಟದ ಹತ್ತಿರ ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದ ಶಫಿ ಮತ್ತು ಇತರ ಮೂವರ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ರು. 5910 ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಹನಗಳ ಹರಾಜು
ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಹತ್ತು ದ್ವಿಚಕ್ರ ವಾಹನಗಳನ್ನು ಮಾ.27ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಪೊಲೀಸ್ ಠಾಣೆಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ. ವಿವರಗಳನ್ನು ಠಾಣೆಯಲ್ಲಿ ಪಡೆಯಬಹುದು.
ಯುವತಿ ನಾಪತ್ತೆ
ಶಿವಮೊಗ್ಗ: ನಗರದ ಗುಂಡಪ್ಪ ಶೇಡ್ನ ಕಮಲ ಎಂಬುವವರ ಮಗಳು ಕವಿತ ಕಾಣೆಯಾಗಿದ್ದಾರೆ. 17 ವರ್ಷದ ಈಕೆ ದುಂಡುಮುಖ,ಧೃಡಕಾಯ ಮೈಕಟ್ಟು ಎಣ್ಣೆಗಂಪು ಬಣ್ಣ, 5.2 ಅಡಿ ಎತ್ತರ, ಬಲಗೈಯಲ್ಲಿ ಅಣ್ಣ ಅಂತ ಹಚ್ಚೆ ಇರುತ್ತದೆ. 12 ಇಂಚು ಉದ್ದನೆಯ ತಲೆಕೂದಲು ಇದ್ದು, ಎಸ್ಎಸ್ಎಲ್ಸಿ ವರೆಗೆ ಓದಿದ್ದಾರೆ. ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾರೆ. ಈ ಚಹರೆಯ ಯುವತಿ ಪತ್ತೆಯಾದಲ್ಲಿ ಕೋಟೆ ಠಾಣೆ (08182-261415), ಕೋಟೆ ಸರ್ಕಲ್(08182-261408)ಸಂಪರ್ಕಿಸುವಂತೆ ಎಂದು ಕೋಟೆ ಠಾಣೆಯ ಪಿಎಸ್ಐ ಶೈಲಕುಮಾರ್ ತಿಳಿಸಿದ್ದಾರೆ.