ಕರ್ತವ್ಯಕ್ಕೆ ಹಾಜರಾದ ರಂಗಾಯಣ ಕಲಾವಿದರು
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.26
ಎಷ್ಟು ಹೋರಾಟಗಳು ನಡೆದರೇನು, ಬಿ.ವಿ. ಕಾರಂತರು ಕಟ್ಟಿದ ಮೈಸೂರು ರಂಗಾಯಣ ರೆಪರ್ಟರಿ ವಿದ್ಯುಕ್ತವಾಗಿ ವಿಭಜನೆಯಾಗಿದೆ. ಅಲ್ಲಿದ್ದ 18 ಕಲಾವಿದರಲ್ಲಿ ತಲಾ ಆರು ಕಲಾವಿದರು ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣಕ್ಕೆ ಗುರುವಾರ ಕರ್ತವ್ಯಕ್ಕೆ ಹಾಜರಾದರು.
ಮೈಸೂರು ರಂಗಾಯಣ ಆರಂಭವಾದಾಗಿನಿಂದ ಅಲ್ಲಿಯೇ ಇದ್ದ ಕಲಾವಿದರಿಗೆ ವರ್ಗಾವಣೆ ಆದೇಶ ನೀಡಿದ್ದು, ಮಾ.27ರೊಳಗೆ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಆದೇಶಿಸಿತ್ತು. ತಪ್ಪಿದರೆ ಅಮಾನತು ಮಾಡುವುದಾಗಿಯೂ ಎಚ್ಚರಿಸಿತ್ತು. ಇದನ್ನು ವಿರೋಧಿಸಿ ಮೈಸೂರಿನಲ್ಲಿ ರಂಗಾಯಣ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರವು ರಂಗಾಯಣ ನಿರ್ದೇಶಕ ಡಾ. ಬಿ.ವಿ. ರಾಜಾರಾಂ ಅವರನ್ನು ವಜಾ ಮಾಡಿತ್ತು.
ಸರ್ಕಾರ ವರ್ಗಾವಣೆಯನ್ನು ಹಿಂಪಡೆಯದೇ ಪಟ್ಟು ಮುಂದುವರಿಸಿದಾಗ ಕಲಾವಿದರು ಅನಿವಾರ್ಯವಾಗಿ ನಿಯೋಜಿತ ಸ್ಥಳಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾಗಬೇಕಾಗಿ ಬಂತು.
ಶಿವಮೊಗ್ಗಕ್ಕೆ; ಮಂಜುನಾಥ್ ಬಳಕೆರೆ, ಹುಲಗಪ್ಪ ಕಟ್ಟಿಮನಿ, ಪ್ರಮೀಳಾ ಬೇಂಗ್ರೆ, ಮಹದೇವ, ಶಶಿಕಲ ಬಿ.ಎನ್., ಎಂ.ಸಿ. ಕೃಷ್ಣಪ್ರಸಾದ್ ಅವರು ಶಿವಮೊಗ್ಗ ರಂಗಾಯಣಕ್ಕೆ ವರ್ಗಾವಣೆಯಾಗಿದ್ದಾರೆ. ಗುರುವಾರ ಕುವೆಂಪು ರಂಗಮಂದಿರದಲ್ಲಿರುವ ರಂಗಾಯಣ ಕಚೇರಿಗೆ ಆಗಮಿಸಿದ ಕಲಾವಿದರು ನಿರ್ದೇಶಕ ಹೊ.ನ. ಸತ್ಯ ಅವರನ್ನು ಭೇಟಿ ಮಾಡಿ, ನಂತರ ಆಡಳಿತಾಧಿಕಾರಿ ಎನ್. ಹರಿಕುಮಾರ್ ಅವರಲ್ಲಿ ಕರ್ತವ್ಯ ಹಾಜರಾತಿ ಪತ್ರ ಪಡೆದರು.
ಧಾರವಾಡ ರಂಗಾಯಣಕ್ಕೆ ಪ್ರಶಾಂತ್ ಹಿರೇಮಠ, ಕೃಷ್ಣಕುಮಾರ್ ನಾರ್ಣಕಜೆ, ನಂದಿನಿ ಕೆ.ಆರ್., ಮೈಮ್ರುಮೇಶ್, ಜಗದೀಶ ಮನೆವಾರ್ತೆ, ನೂರ್ ಅಹ್ಮದ್ ಶೇಟ್ ಅವರು ವರ್ಗಾವಣೆಯಾಗಿದ್ದಾರೆ.
ಗೀತಾ ಮಂಟಡ್ಕ, ವಿನಾಯಕ ಭಟ್, ರಾಮನಾಥ, ಸಂತೋಷ್‌ಕುಮಾರ್ ಕುಸನೂರು, ಸರೋಜ ಹೆಗ್ಡೆ, ಎಸ್. ರಾಮು ಅವರು ಮೈಸೂರಲ್ಲೇ ರಂಗಾಯಣದಲ್ಲಿಯೇ ಉಳಿದಿದ್ದಾರೆ.