'ಕ್ರಿಯಾಶೀಲತೆ ಅಗತ್ಯ'
ಕನ್ನಡಪ್ರಭ ವಾರ್ತೆ ಸೊರಬ ಮಾ.26
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ನಂತರ ತಾಲೂಕಿನಲ್ಲಿ ಯಾವುದೇ ಕ್ರಿಯಾಶೀಲ ವ್ಯಕ್ತಿ ರಾಜಕಾರಣದಲಿಲ್ಲ ಎಂದು ಕೃಷಿಕ ಗುರುಮೂರ್ತಿ ಕೆ.ಬಿ. ಓಟೂರು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಚುನಾವಣೆ ಸಮೀಪಿಸಿದೆ, ಬಣ್ಣದ ಮಾತುಗಳು, ಆಶ್ವಾಸನೆಯ ಮಹಾಪೂರ, ಮುಗ್ಧ ಜನರನ್ನು ಧಿಕ್ಕು ತಪ್ಪಿಸುವ ಕಸರತ್ತು ಆರಂಭಗೊಂಡಿದೆ. ಆದರೆ, ತಾಲೂಕಿನ ಜನತೆ ಈ ಹಿಂದೆ ಇಲ್ಲಿಂದ ಚುನಾಯಿಸಿಕೊಂಡು ಹೇಗೆ ಆಡಳಿತ ನಡೆಸಿದ್ದಾರೆ ಎಂಬ ಅರಿವು ನಿಚ್ಚಳವಾಗಿ ಗೋಚರಿಸಿದೆ.
ಭ್ರಷ್ಟಾಚಾರ, ಕಳಪೆ ಕಾಮಗಾರಿ, ಆಂತರಿಕ ತಿಕ್ಕಾಟ, ಕಾಲು ಜಗ್ಗಾಟ ಇತ್ಯಾದಿ ಪ್ರಜಾಪ್ರಭುತ್ವದ ಮೂಲ ನೆಲಗಟ್ಟನ್ನು ಹಾಳು ಗೆಡುವುವ ಎಲ್ಲ ಪ್ರಕ್ರಿಯೆಗಳನ್ನು ಪ್ರತ್ಯಕ್ಷ ನೋಡಿರುವ ಪ್ರಜ್ಞಾವಂತ ಮತದಾರರಿಂದು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆ ಇದೆ ಎಂದರು.
ತಾಲೂಕಿಗೆ ಕುಟುಂಬ ರಾಜಕಾರಣ ಅಗತ್ಯವಿಲ್ಲ, ನಮಗೀಗ ನಮ್ಮ ಪ್ರಚಲಿತ ಬದುಕನ್ನು ಅರ್ಥೈಸಿಕೊಂಡು ಸಮಾಜಿಕ ನ್ಯಾಯ ಕೊಡಿಸುವ ಜನಪ್ರತಿನಿಧಿ ಅಗತ್ಯವಿದೆ. ಈ ಎಲ್ಲ ಹತ್ತು ಹಲವಾರು ಕೋನಗಳಿಂದ ಗಮನಿಸಿದಾಗ ನಾನೂ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ, ಜನತೆಯ ಆಂತರಿಕ ತುಮಲಗಳಿಗೆ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕೆಂದು ಇಚ್ಚಿಸಿದ್ದೇನೆ ಎಂದರು.