ನೀರಿನ ಶುಲ್ಕ ಏರಿಕೆ: ಧರಣಿ
ಕ.ಪ್ರ. ವಾರ್ತೆ ಶಿವಮೊಗ್ಗ ಮಾ.26
ನಗರದ ನಾಗರಿಕರ ಮೇಲೆ ಅಧಿಕ ನೀರಿನ ಶುಲ್ಕ ಏರಿಕೆ ಮಾಡಿರುವ ನಗರಸಭೆ ನಿರ್ಧಾರ ಖಂಡಿಸಿ ಮಂಗಳವಾರ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಸದಸ್ಯರು ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ನಗರಸಭೆ, 2013-14ನೇ ಸಾಲಿನ ಆಯವ್ಯಯ ಅನುಮೋದನೆ ಪಡೆದುಕೊಂಡು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿಗೆ ಮಾಸಿಕ 60ಯಿಂದ 120 ಹಾಗೂ ವಾಣಿಜ್ಯ ಬಳಕೆದಾರರಿಗೆ 120ಯಿಂದ 240ಕ್ಕೆ ಹೆಚ್ಚಳ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತುಂಗಾನದಿ ತಟದಲ್ಲಿರುವ ಶಿವಮೊಗ್ಗ ನಗರಕ್ಕೆ ಸಮೃದ್ಧವಾಗಿ ಕುಡಿಯುವ ನೀರು ಲಭ್ಯವಿದ್ದರೂ, ಜನತೆ ಕುಡಿಯುವ ನೀರಿಗೆ ಹೆಚ್ಚಿನ ಹಣ ಪಾವತಿ ಮಾಡಬೇಕಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಬೇಸರ ತಂದಿದೆ. ಆದ್ದರಿಂದ ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳು ಕೂಡಲೇ ಸಭೆ ಕರೆದು ಜನರ ಹಿತ ಕಾಯುವ ತೀರ್ಮಾನ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರಸಭೆಗೆ ಆಯ್ಕೆಯಾದ 35 ವಾರ್ಡ್ಗಳ ಜನಪ್ರತಿನಿಧಿಗಳು ಹಾಗೂ ವಿಧಾನಸಭಾ ಸದಸ್ಯರು ಈ ಬಗ್ಗೆ ಗಮನ ಹರಿಸದಿರುವುದು ವಿಷಾದಕರ ಸಂಗತಿ. ಆದ್ದರಿಂದ ನಗರಸಭೆ ಹಾಗೂ ವಿಧಾನಸಭಾ ಸದಸ್ಯರು ವೈಯಕ್ತಿಕವಾಗಿ ಗಮನಹರಿಸಿ, ಈ ನಿರ್ಣಯವನ್ನು ಹಿಂಪಡೆಯಬೇಕು, ಈ ಹಿಂದಿನ ಮಾಸಿಕ ನೀರಿನ ಶುಲ್ಕವನ್ನು ಮುಂದುವರೆಸುವಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮಿತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ವಿ. ಭಗವಾನ್ ಇದ್ದರು.