ಮತ ಯಾರಿಗೆ? ಇವರಿಗೋ, ಅವರಿಗೋ
ಶ್ರೀಕಾಂತ ಭಟ್
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.26
ಮತದಾನದ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಮಲೆನಾಡಿನ ಮಡಿಲಲ್ಲಿ ಮತ ನಿರ್ಧರಿಸುವ ಸಮಸ್ಯೆಗಳು ಧುತ್ತೆಂದು ಎದ್ದು ಕುಳಿತಿವೆ. ಈ ಸಮಸ್ಯೆಗಳೇ ಮತದಾರನ ಮನ ಕದಲುವ ಪ್ರಮುಖ ಅಂಶಗಳು. ಒಟ್ಟು ಮತದಾನದಲ್ಲಿ ಒಂದಷ್ಟು ಪ್ರಮಾಣದ ದಿಕ್ಕುಬದಲಿಸುವ, ಅಥವಾ ಮತದಾನದಿಂದಲೇ ಸಾಮಾನ್ಯನನ್ನು ದೂರು ಉಳಿಸುವ ಸಮಸ್ಯೆಗಳಿವು.
ಇನ್ನೊಂದು ಅಚ್ಚರಿ ಎಂದರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕ ಸಮಸ್ಯೆಗಳು ಮತ ನಿರ್ಧರಿಸುವ ಅಂಶಗಳಾಗಿವೆ.
ತೀರ್ಥಹಳ್ಳಿಯಲ್ಲಿ ಅಡಕೆ ಸದ್ದು: ಈ ಚುನಾವಣೆಯಲ್ಲಿ ಅಡಕೆ ಸದ್ದು ಮಾಡಲಿದೆ. ಅಡಕೆ ಬೆಳೆಗಾರರಿಗೆ ನೆರವಾದವರು ಯಾರು, ಯಾವ ಪಕ್ಷದವರು ಎಂಬುದನ್ನು ಮನದಟ್ಟುಮಾಡಿಕೊಡಲು ರಾಜಕೀಯ ಪಕ್ಷಗಳು, ಅಭ್ಯರ್ಥ್ಯನ ನಿಕ್ಕಿಯಾದವರು ನಿರ್ಧರಿಸಿದ್ದಾರೆ. ಅದೇ ರೀತಿ ಅಡಕೆ ಬೆಳೆಗಾರರೂ ಸಹ ಅದನ್ನು ಅಪೇಕ್ಷಿಸುತ್ತಿದ್ದಾರೆ.
ಕನ್ನಡಪ್ರಭ ತೀರ್ಥಹಳ್ಳಿಯ ಅಡಕೆ ಬೆಳೆಗಾರರನ್ನು ಮಾತನಾಡಿಸಿದಾಗ ಅವರು ಈ ವಿಷಯ ಪ್ರಸ್ತಾಪಿಸಿದರು. ಅಡಕೆ ಬೆಳೆಗಾರರಿಗೆ ನೆರವಾಗುವಂತಹ ಯಾವುದೇ ನಿರ್ಧಾರಗಳು ಸರ್ಕಾರದ ಕಡೆಯಿಂದ ಬಂದಿಲ್ಲ. ಅಡಕೆ ಬೆಳೆಗೆ ತಗುಲಿರುವ ರೋಗಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಅದಕ್ಕೆ ಸೂಕ್ತ ಪರಿಹಾರ ಕೊಡಿಸುವ ವಿಚಾರದಲ್ಲಿ ಜನಪ್ರತಿನಿಧಿಗಳ ಪ್ರಯತ್ನ ಹೇಳಿಕೆಗಳಿಗೆ ಸೀಮಿತಗೊಂಡಿವೆ, ಅನುಷ್ಠಾನಕ್ಕೆ ಬಂದಿಲ್ಲ ಎಂಬ ಸಾಮಾನ್ಯ ಅಭಿಪ್ರಾಯವಿದೆ. ಒಟ್ಟಾರೆ ಬೆಳೆಗಾರರನ್ನು ಸೆಳೆಯಲು ಯಾರು ಏನು ಮಾಡುತ್ತಾರೋ ಕಾಡುದುನೋಡಬೇಕಾಗಿದೆ.
ಬಗರ್ಹುಕುಂ: ಸಾಗರ ಕ್ಷೇತ್ರದಲ್ಲಿ ಈ ಬಾರಿ ಬಗರ್ ಹುಕುಂ ವಿಚಾರ ಮತ್ತು ಅಂಬಾರಗೊಡ್ಲು ಸೇತುವೆ ವಿಚಾರ ಪ್ರಮುಖ ವಿಚಾರವಾಗುವ ಸಾಧ್ಯತೆ ಇದೆ.
ಚುನಾವಣೆ ದಿನಾಂಕ ಘೋಷಣೆಯಾಗುವ 3-4 ತಿಂಗಳ ಮುಂಚಿನಿಂದಲೇ ಕಾಂಗ್ರೆಸ್ ಬಗರ್ಹುಕುಂ ಎಂಬ ಅಸ್ತ್ರ ಎತ್ತಿಕೊಂಡು ಹಳ್ಳಿಹಳ್ಳಿಗೆ ಹೋಗಿಬಂದಿದೆ. ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿ ಕಳೆದ ಬಾರಿ ಮತ ಗಳಿಸಿಕೊಂಡಿದ್ದ ಬಿಜೆಪಿ ಸಮಸ್ಯೆಯನ್ನು ಶೈತ್ಯಾಗಾರದಲ್ಲೇ ಇಟ್ಟಿದೆ ಎಂಬಂಶವನ್ನು ಜನರ ಮನಸ್ಸಿನಲ್ಲಿ ಬಿತ್ತಲು ಕಾಂಗ್ರೆಸ್ ನಾಯಕರು ಪ್ರತಿ ಹಳ್ಳಿಯ ಕಟ್ಟೆ ಸಭೆ ನಡೆಸಿಬಂದಿದ್ದಾರೆ.
ಬಹುತೇಕ ಸಾಗರ ಗ್ರಾಮಾಂತರ ಭಾಗದಲ್ಲಿ ಈ ಚುನಾವಣೆಯಲ್ಲಿ ಮತ ನಿರ್ಧರಿಸುವ ವಿಷಯ ಇದೆ. ಹಾಗೆಯೇ ಅಂಬಾರಗೊಡ್ಲು ಸೇತುವೆ ನಿರ್ಮಾಣ ವಿಷಯವೂ ಸಾಗರದ ಒಂದು ಭಾಗದಲ್ಲಿ ಪ್ರಮುಖ ವಿಷಯ. ಸೇತುವೆ ನಿರ್ಮಾಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಹಾಲಿ ಶಾಸಕರು ಹೇಳಿಕೊಂಡು ಬಂದರೂ ಸಹ ಜನ ಕಾಮಗಾರಿ ಎಲ್ಲಿ ಎಂದು ಕೇಳುತ್ತಾರೆ. ಶಿಕಾರಿಪುರದಲ್ಲೂ ಸಹ ಬಗರ್ಹುಕುಂ ವಿಚಾರ ದೊಡ್ಡ ಚರ್ಚಾ ವಿಷಯ. ಸರ್ಕಾರ ಸಮಸ್ಯೆ ಬಗೆಹರಿಸಿಲ್ಲ ಎಂಬುದೇ ಕೆಜೆಪಿ, ಬಿಜೆಪಿಯೇತರ ಪಕ್ಷಗಳ ಅಸ್ತ್ರ. ಜೆಡಿಎಸ್ ಸಹ ಇದೇ ವಿಷಯ ಇಟ್ಟುಕೊಂಡು ಪಾದಯಾತ್ರೆಯನ್ನೂ ನಡೆಸಿತು.
ಸೊರಬದಲ್ಲಿ ದಂಡಾವತಿ: ಕಳೆದ ಚುನಾವಣೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ವಿಷಯ ಹಾಗೂ ನಿಕಟಪೂರ್ವ ಶಾಸಕರಿಗೆ ಅನುಕೂಲಕರ ವಾತಾವರಣ ಕಲ್ಪಿಸಿದ್ದು ದಂಡಾವತಿ ಯೋಜನೆ. ದಂಡಾವತಿ ಯೋಜನೆ ಅನುಷ್ಠಾನ ಖಚಿತ ಎಂಬ ಭರವಸೆ ಕಳೆದ ಬಾರಿ ಆನವಟ್ಟಿ, ಜಡೆ ಭಾಗದಲ್ಲಿ ಮತವಾಗಿ ಪರಿವರ್ತನೆಗೊಂಡಿತ್ತು. ನಂತರದ ದಿನಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆದರೂ ಅನುಷ್ಠಾನದ ಯಾವ ಕುರುಹೂ ಈಗಿಲ್ಲ. ಈ ಬಾರಿಯೂ ದಂಡಾವತಿ ಪರ ವಿರೋಧದ ಮತಗಳು ಯಾರನ್ನು ಕೈಹಿಡಿಯಲಿವೆ ಎಂಬುದು ಪ್ರಶ್ನೆ.
ಭದ್ರಾವತಿಯಲ್ಲಿ ಕಾರ್ಮಿಕ: ಜಿಲ್ಲೆಯ ಮಟ್ಟಿಗೆ ಕಾರ್ಮಿಕ ನಗರಿ ಭದ್ರಾವತಿ. ಅಂದ ಮೇಲೆ ಈ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಮಿಕ ಸಮಸ್ಯೆಯೇ ಚುನಾವಣೆಯ ಪ್ರಧಾನ ವಿಷಯ. ಎಂಪಿಎಂ ಖಾಸಗೀಕರಣ ಸೇರಿದಂತೆ ಕಾರ್ಖಾನೆಗಳ ಅಭಿವೃದ್ಧಿ, ಅವ್ಯವಹಾರ, ಆರೋಪ-ಪ್ರತ್ಯಾರೋಪಗಳು ಬಹಿರಂಗವಾಗಿ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಇದು ಚುನಾವಣೆಯ ಆಹಾರವಾಗಲಿದೆ. ಹಾಲಿ-ಮಾಜಿ ಶಾಸಕರು, ಹೊಸ ಅಭ್ಯರ್ಥಿಗಳು ಇದೇ ವಿಚಾರ ಇಟ್ಟುಕೊಂಡೆ ಮತ ಕೇಳುವ ಅನಿವಾರ್ಯತೆಯೂ ಇದೆ.
ಅಭಿವೃದ್ಧಿಯೇ ಸಮಸ್ಯೆ: ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಮತವಾಗಿ ಪರಿವರ್ತಿತವಾಗುವ ಯಾವುದೇ ಸಮಸ್ಯೆಯ ವಿಷಯಗಳಿಲ್ಲ. ಆದರೆ, ಅಭಿವೃದ್ಧಿಯೇ ಇಲ್ಲಿನ ಪ್ರಮುಖ ವಿಚಾರ. ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಂತೂ ಅಭಿವೃದ್ಧಿ ಹಿನ್ನಡೆಯೇ ಪ್ರಮುಖ ವಿಷಯ. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿಯೇತರ ಪಕ್ಷಗಳು ನಿರ್ಧರಿಸಿವೆ.
ಇನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಂದರೆ, ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೆ, ಅಭಿವೃದ್ಧಿ ಮಾಡಿದ್ದು ಯಾರು ಎಂಬುದೇ ಪ್ರಮುಖ ನಿರ್ಧಾರಿತ ಅಂಶ. ಶಿವಮೊಗ್ಗಕ್ಕೆ ಹತ್ತಾರು ಯೋಜನೆ ತಂದು, ಸಾವಿರಾರು ಕೋಟಿ ನೀಡಿದ್ದು ಬಿ.ಎಸ್. ಯಡಿಯೂರಪ್ಪ, ಹೀಗಾಗಿ ಅಭಿವೃದ್ಧಿಯ ಕ್ರೆಡಿಟ್ ಬಿಜೆಪಿಗೆ ಸೇರುತ್ತದೆ ಎಂಬುದು ಕೆಜೆಪಿ ನಾಯಕರ ವಾದ. ಅದೇ ರೀತಿ, ನಮ್ಮ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಾಗಿವೆ. ಇದು ಸರ್ಕಾರದ ಹಣ, ಯಾವುದೇ ವ್ಯಕ್ತಿಯ ಸ್ವಂತ ಹಣದಿಂದಲ್ಲ. ಹೀಗಾಗಿ ನಮಗೆ ಕ್ರೆಡಿಟ್ ಸಲ್ಲಬೇಕು. ಇದೇ ವಿಚಾರ ಇಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಎನ್ನುತ್ತಾರೆ ಬಿಜೆಪಿ ನಾಯಕರು.