ಮೂವರು ವಿದ್ಯಾರ್ಥಿಗಳು ನೀರು ಪಾಲು
ಕ.ಪ್ರ. ವಾರ್ತೆ ತೀರ್ಥಹಳ್ಳಿ ಮಾ.26
ಈಜಲು ಹೋಗಿ ಮೂವರು ಶಾಲಾ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ತಾಲೂಕಿನ ಮೇಗರವಳ್ಳಿ ಸಮೀಪದ ಸಂಪಗದ್ದೆ ಹಿನ್ನೀರಿನಲ್ಲಿ ನಡೆದಿದೆ.
ಆಸಿಫ್ (15), ಅಲ್ಫಾಸ್ (15), ಸಚಿನ್ (15) ಈ ಮೂವರು ಮೇಗರವಳ್ಳಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ 8ನೇ ತರಗತಿ ವಿದ್ಯಾರ್ಥಿಗಳು. ಮಂಗಳವಾರ ಪರೀಕ್ಷೆ ಮುಗಿಸಿ ಮೋಜಿಗಾಗಿ ಸ್ನಾನಕ್ಕೆಂದು ಸಮೀಪದ ಸಂಪಗದ್ದೆ ವಾರಾಹಿ ಹಿನ್ನೀರಿಗೆ ಹೋಗಿದ್ದು, ಇಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಸಂಜೆ 4 ಗಂಟೆ ವೇಳೆಗೆ ಅಗ್ನಿಶಾಮಕ ದಳದವರು ಶವವನ್ನು ಹಿನ್ನೀರಿನಿಂದ ಮೇಲೆತ್ತಿದ್ದಾರೆ. ಈ ಮೂವರು ವಿದ್ಯಾರ್ಥಿಗಳು ಮೇರಗವಳ್ಳಿ ವಾಸಿಗಳಾಗಿದ್ದರು. ಒಟ್ಟು 4 ವಿದ್ಯಾರ್ಥಿಗಳು ಈಜಲು ತೆರಳಿದ್ದರು. ಈಜಾಡುವ ಸಂದರ್ಭದಲ್ಲಿ ಮೂವರು ಕೆಸರಿನಲ್ಲಿ ಸಿಕ್ಕಿಕೊಂಡಿದ್ದಾರೆ. ಒಬ್ಬರ ಕೈಯನ್ನು ಒಬ್ಬರು ಹಿಡಿದುಕೊಂಡ ಕಾರಣ ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಒಬ್ಬ ವಿದ್ಯಾರ್ಥಿ ಮಾತ್ರ ಈಜಿ ದಡ ಸೇರಿದ್ದು, ಕೂಡಲೇ ಆತ ಊರಿನತ್ತೆ ಓಡಿ ಬಂದು ಜನರಿಗೆ ಸುದ್ದಿ ಮುಟ್ಟಿಸಿದ್ದಾನೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು, ನೀರಿನಲ್ಲಿ ಮುಳುಗಿದ್ದ ದೇಹಗಳನ್ನು ಹೊರತೆಗೆದರು. ಮೃತನ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು. ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ಅಪಹರಣ
ಭದ್ರಾವತಿ: ಪಟ್ಟಮದ ಹೊರವಲಯದಲ್ಲಿರುವ ಹೊಸ ಸಿದ್ದಾಪುರದ ಬಳಿ ಪಾರ್ಥಿಬನ್ ಎಂಬುವನನ್ನು ಮೂರು ಕಾರಿನಲ್ಲಿ ಬಂದ ಸುಮಾರು 15 ಮಂದಿ ಅಪಹರಿಸಿರುವ ಘಟನೆ ವರದಿಯಾಗಿದೆ. ಸೋಮವಾರ ಪಾರ್ಥಿಬನ್ ಕರಿಯ ಸಹೋದರ ಪ್ರದೀಪ ತನ್ನ ಗೆಳೆಯರೊಂದಿಗೆ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಮದ್ಯ ಮಾರಾಟ
ರಾಜ್ಯ ಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ರಾಜ್ ಮಿಲಿಟರಿ ಹೋಟೆಲ್‌ನಲ್ಲಿ ಅಕ್ರಮವಾಗಿ ಮದ್ಯ ಶೇಖರಿಸಿಟ್ಟು ಮಾರಾಟ ಮಾಡುತ್ತಿದ್ದುದರ ಬಗ್ಗೆ ಆರಕ್ಷಕ ವೃತ್ತ ನಿರೀಕ್ಷಕ ಜೆ.ಜೆ. ತಿರುಮಲೇಶ್‌ಗೆ ಬಂದ ಖಚಿತ ಮಾಹಿತಿ ಮೇರೆಗೆ ಹೋಟೆಲ್ ಮೇಲೆ ಸೋಮವಾರ ಬೆಳಗ್ಗೆ ದಾಳಿಮಾಡಿ 29,180 ಎಂಎಲ್ ಮದ್ಯದ ಬಾಟಲಿಗಳು, 3 90 ಎಂಎಲ್ ಮದ್ಯದ ಬಾಟಲಿಗಳು ಹಾಗೂ 1240 ನಗದು ವಶಪಡಿಸಿಕೊಂಡು ಹೋಟೆಲ್ ಮಾಲಿಕನನ್ನು ಬಂಧಿಸಿದ್ದಾರೆ.
ರಸ್ತೆ ಅಪಘಾತ: ಸಾವು
ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವರು ಮೃತಪಟ್ಟಿದ್ದು ಮತ್ತೋರ್ವರಿಗೆ ಗಂಭೀರ ಸ್ವರೂಪದ ಗಾಯಗಳಾದ ಘಟನೆ ಜರುಗಿದೆ. ಬಿ.ಎಚ್.ರಸ್ತೆಯಲ್ಲಿ ಗಣೇಶ ಏಜೆನ್ಸಿ ಮುಂದೆ ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿದ್ದ ಗೋವಿಂದರಾಜು ಮತ್ತು ರಂಗಸ್ವಾಮಿ ಅವರಿಗೆ ಹಿಂದಿನಿಂದ ಮೋಟಾರ್‌ಸೈಕಲ್‌ನಲ್ಲಿ ಬಂದ ರುದ್ರೇಶ್ ಢಿಕ್ಕಿ ಹೊಡೆದ ಪರಿಣಾಮ ಈರ್ವರೂ ಬೈಕಿನಿಂದ ಕೆಳಗೆ ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಗೋವಿಂದರಾಜು ಮೃತಪಟ್ಟಿದ್ದಾರೆ. ರಂಗಸ್ವಾಮಿಗೆ ಗಂಭೀರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೆತ್ತ ಮಕ್ಕಳನ್ನೇ ಬಿಟ್ಟು ಪರಾರಿಯಾದ ತಾಯಂದಿರು
ಶಿವಮೊಗ್ಗ: ತಾವೇ ಜನ್ಮ ನೀಡಿದ ಮಗುವನ್ನೇ ಬಿಟ್ಟು ಪರಾರಿಯಾಗುವ ತಾಯಂದಿರು ಇದ್ದಾರೆಯೇ ಎಂದರೇ ಆಶ್ಚರ್ಯವೆನಿಸಬಹುದು. ಆದರೆ, ಇದು ಸತ್ಯ. ಇಂತಹ ಘಟನೆಗೆ ಸಾಕ್ಷಿಯಾಗಿದ್ದು ನಗರದ ಮೆಗ್ಗಾನ್ ಆಸ್ಪತ್ರೆ.ಕಳೆದ ಜ.21ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಸುಹಾನ (ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾತಿಯ ಪ್ರಕಾರ) ಎರಡು ತಿಂಗಳ ಕಾಲ ಮಗುವನ್ನು ಪಾಲನೆ ಮಾಡಿದ್ದಾರೆ. ನಂತರ ಏಕೋ ಏನೋ ತನ್ನ ಮಗುವನ್ನು ಬಿಟ್ಟು ಹೋಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಾ.11ರಂದು ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಸವಿತಾಬಾಯಿ (ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾತಿಯ ಪ್ರಕಾರ) ತನ್ನ ಮಗುವನ್ನು ಬಿಟ್ಟು ಹೋಗಿದ್ದಾರೆ. ಈ ಮಕ್ಕಳನ್ನು ಇಲ್ಲಿನ ಸರ್ಕಾರಿ ಬಾಲಕರ ಬಾಲಮಂದಿರ ಸಂಸ್ಥೆಯ ಸ್ವಾಗತ ಕೇಂದ್ರಕ್ಕೆ ನೀಡಿದ್ದು, ಕೇಂದ್ರ ಮಕ್ಕಳ ಪಾಲಕ ಅಥವಾ ಪೋಷಕರ ಪತ್ತೆಗಾಗಿ ಹೆಣ್ಣು ಹಾಗೂ ಗಂಡು ಶಿಶುವಿನ ವಿವರ ಈ ಇಂತಿದೆ. ಇವರ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಅಧೀಕ್ಷಕರು ಸರ್ಕಾರಿ ಬಾಲಕರ ಬಾಲಮಂದಿರ ಶಿವಮೊಗ್ಗ ಕಚೇರಿ ದೂ.08182 251511 ಸಂಪರ್ಕಿಸಬಹುದು.