ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಿ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.26
ನವುಲೆ ಬಳಿ ಇರುವ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಮಂಗಳವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವುಮಾಡಿಕೊಡುವ ನಿಟ್ಟಿನಲ್ಲಿ ಹಾಸ್ಟೆಲ್ ನಿರ್ಮಿಸಿದ್ದು, ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಹಾಸ್ಟೆಲ್‌ನಲ್ಲಿದ್ದಾರೆ. ಆದರೆ ಇಲ್ಲಿನ ವ್ಯವಸ್ಥೆಯಿಂದ ಬೇಸತ್ತ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿ ನಿಲಯಕ್ಕೆ ಹೋಗಲೂ ಆಗದೆ, ಇರಲು ಆಗದೆ ಅತಂತ್ರ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ ಎಂದು ಪ್ರತಿಭಟನಾಕರರು ಆರೋಪಿಸಿದರು.
ಕಳಪೆ ಆಹಾರ: ಸರ್ಕಾರದಿಂದ ಹಾಸ್ಟೆಲ್‌ನಲ್ಲಿ ಕಂಪ್ಯೂಟರ್ ಸೌಲಭ್ಯ ನೀಡಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಇದನ್ನು ಬಳಸುವ ಭಾಗ್ಯವಿಲ್ಲ. ಸರಿಯಾದ ಸಮಯಕ್ಕೆ ಊಟ ಪೂರೈಕೆ ಮಾಡಲಾಗುತ್ತಿಲ್ಲ. ಆಹಾರದ ಗುಣಮ್ಟಟ ಕುಸಿಯುತ್ತಿದೆ. ಕುಡಿಯುವ ನೀರಿಗೆ ವಾಟರ್ ಫಿಲ್ಟರ್ ಇದ್ದರೂ ಕಲುಷಿತ ನೀರು ಕುಡಿಯುವ ಸ್ಥಿತಿಯಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ತಾರತಮ್ಯ: ಹಾಸ್ಟೆಲ್ ವಾರ್ಡ್‌ನ್ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ಕಾಣುತ್ತಿದ್ದಾರೆ.ಅವರೊಂದಿಗೆ ಸಖ್ಯ ಬಯಸುವ ವಿದ್ಯಾರ್ಥಿಗಳನ್ನು ಒಂದು ರೀತಿ, ಇತರೆ ವಿದ್ಯಾರ್ಥಿಗಳನ್ನು ಒಂದು ರೀತಿ ಕಾಣುತ್ತಿದ್ದು, ವಿದ್ಯಾರ್ಥಿಗಳಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಪಾತ್ರೆ, ಶೌಚಾಲಯ, ವಾಟರ್ ಟ್ಯಾಂಕ್ ಶುಚಿಗೊಳಿಸುಲು ಸಿಬ್ಬಂದಿಗಳಿದ್ದರೂ ವಿದ್ಯಾರ್ಥಿಗಳು ಹಾಗೂ ಅಡುಗೆ ಮಾಡುವವರ ಬಳಿ ಶುಚಿ ಕಾರ್ಯ ಮಾಡಿಸುತ್ತಿರುವುದು ಶೋಚನೀಯ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ವಿದ್ಯಾರ್ಥಿ ನಿಲಯ ನಗರದ ಹೊರವಲಯದಲ್ಲಿ ಇರುವುದರಿಂದ ಸಮರ್ಪಕವಾದ ಸಾರಿಗೆ ಇಲ್ಲ, ವಿದ್ಯುತ್ ಸಮಸ್ಯೆ ಇದೆ. ಈ ಸಂಬಂಧ ಹಲವಾರು ಬಾರಿ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಹಾಸ್ಟೆಲ್ ವಾರ್ಡನ್ ಬಳಿ ಸಮಸ್ಯೆ ತಿಳಿಸಿದರೆ ಅಂತಹ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೂಡಲೇ ಈ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು, ಹಾಸ್ಟೆಲ್‌ಗಳಿಗೆ ಸಮರ್ಪಕವಾಗಿ ವಿದ್ಯುತ್, ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಚೇತನ್, ದೇವೇಂದ್ರಪ್ಪ, ಶ್ರೀಜಿತ್, ವಿಕಾಸ್, ವಿನಯ್, ಶಿವಶಂಕರ್, ಸಂತೋಷ್‌ಕುಮಾರ್, ಬಸವರಾಜ್, ರಾಘವೇಂದ್ರ ಇದ್ದರು.