ಆರ್ಥಿಕ ಅಪರಾಧ ತಡೆಗೆ ಬ್ಯಾಂಕ್‌ಗಳ ಸಹಕಾರ ಅಗತ್ಯ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.27
ಮುಂಬರುವ ಚುನಾವಣೆಯಲ್ಲಿ ಸಂಭವಿಸಬಹುದಾದ ಆರ್ಥಿಕ ಅಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬ್ಯಾಂಕುಗಳು ತಮ್ಮ ಬ್ಯಾಂಕಿನಲ್ಲಿ ವ್ಯವಹರಿಸುವ ಗ್ರಾಹಕರ ಖಾತೆಗಳಲ್ಲಿನ ವ್ಯವಹಾರವನ್ನು ಎಚ್ಚರಿಕೆಯಿಂದ ಗಮನಿಸಿ, ಸಂಶಯಾಸ್ಪದ ನಡವಳಿಕೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್‌ಬ್ಯಾಂಕುಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ಬುಧವಾರ ಕೆನರಾ ಬ್ಯಾಂಕ್, ಲೀಡ್‌ಬ್ಯಾಂಕ್ ಆಯೋಜಿಸಿದ್ದ ಬ್ಯಾಂಕರುಗಳ ಸಭೆಯಲ್ಲಿ ಭಾಗವಹಿಸಿ, ಬ್ಯಾಂಕರುಗಳು ತಮ್ಮ ಗ್ರಾಹಕರ ಖಾತೆಗಳಲ್ಲಿ ನಡೆಯುವ ಹಣಕಾಸಿನ ವ್ಯವಹಾರಗಳ ವಿವರಗಳನ್ನು ತಿಳಿಸಬೇಕೆಂದು ಹೇಳಿದರು.
ಚುನಾವಣೆಯಲ್ಲಿ ಹಣದ ಚಲಾವಣೆ ಜಾಸ್ತಿ ಇರುವುದರಿಂದ ಸಂಶಯಾಸ್ಪದ ರೀತಿಯಲ್ಲಿ ಹೆಚ್ಚು ಹಣವನ್ನು ಬ್ಯಾಂಕಿಗೆ ಜಮಾ ಮಾಡುವುದು ಹಾಗೂ ಹಣವನ್ನು ಬ್ಯಾಂಕಿನಿಂದ ತೆಗೆಯುವುದು, ಅನಿರೀಕ್ಷಿತವಾಗಿ ಖಾತೆಗಳಲ್ಲಿ ಹಣ ವರ್ಗಾವಣೆ, ಇದರ ಮೇಲೆ ನಿಗಾ ವಹಿಸಿ ಅಂತಹ ಪ್ರತಿಯೊಂದು ವಿವರಗಳನ್ನು ಪ್ರತಿ ದಿನ ತಿಳಿಸಬೇಕೆಂದು ಹೇಳಿದರು.
ಚುನಾವಣಾ ಇಲಾಖೆಗೆ ಮಾಹಿತಿ ನೀಡಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸಂತಿಲ್, ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚಿನ ಬಗ್ಗೆ ನಿಗಾವಹಿಸಲು ಬ್ಯಾಂಕುಗಳು ಅಭ್ಯರ್ಥಿಗಳು 20,000 ಕ್ಕಿಂತ ಹೆಚ್ಚಿನ ಮೊತ್ತವನ್ನು ಕ್ರಾಸ್ಡ್ ಚೆಕ್ ಮುಖಾಂತರ ನೀಡಿರುವ, ಅಥವಾ ಕ್ರಾಸ್ ಮಾಡದೇ ನೀಡಿರುವ ವಿವರಗಳನ್ನು ಚುನಾವಣಾ ಇಲಾಖೆಗೆ ತಿಳಿಸಬೇಕೆಂದು ಹೇಳಿದರು. ಬ್ಯಾಂಕಿನ ಎಲ್ಲಾ ನೌಕರರಿಗೂ ಈ ಬಗ್ಗೆ ಮಾಹಿತಿಯನ್ನು ನೀಡಿ ಆರ್ಥಿಕ ಅಪರಾಧವನ್ನು ತಡೆಗಟ್ಟಬೇಕೆಂದು ಕೋರಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ 2013-14ರ ಜಿಲ್ಲಾ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಮ್.ಕೆ. ಶ್ರೀರಂಗಯ್ಯ, ಕೆನರಾ ಬ್ಯಾಂಕಿನ ಉಪ ಮಹಾಪ್ರಬಂಧಕ ಎಮ್.ಎಮ್. ಚಿನಿವಾರ್, ನಬಾರ್ಡ್‌ನ ರಾಘವೇಂದ್ರ, ಲೀಡ್‌ಬ್ಯಾಂಕ್‌ನ ಸುಬ್ಬರಾವ್ ಉಪಸ್ಥಿತರಿದ್ದರು.