ಕಾನೂನುಬಾಹಿರವಾಗಿ ಬಂಧನ: ಪ್ರತಿಭಟನೆ
ಸಾಗರ: ದಂಡ ಪ್ರಕ್ರಿಯೆ ಸಂಹಿತೆ 107ರ ಪ್ರಕಾರ ತುಮರಿ ವಾಸಿಗಳಾದ ಗಣೇಶ ಹಾಗೂ ಶಿವು ಎಂಬುವವರನ್ನು ತಹಸೀಲ್ದಾರರು ಕಾನೂನುಬಾಹಿರವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಕ್ರಮವನ್ನು ಖಂಡಿಸಿ ಬುಧವಾರ ವಕೀಲರ ಸಂಘದ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ 10 ದಿನಗಳ ಹಿಂದೆ ಹೊಳೆಬಾಗಿಲಿನಲ್ಲಿ ಪ್ರವಾಸಿ ವಾಹನವನ್ನು ಲಾಂಚಿಗೆ ಹಾಕುವ ವಿಷಯದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರ ನಡುವೆ ಸಣ್ಣಪುಟ್ಟ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಲಾಂಚಿನಲ್ಲಿದ್ದ ಹೊರ ಊರಿನ ಓರ್ವ ಸಬ್ ಇನ್ಸ್‌ಪೆಕ್ಟರ್ ತಮಗೆ ಶಿವು ಹಾಗೂ ಗಣೇಶ್ ಎದುರು ಮಾತನಾಡಿದ್ದಾರೆ ಎನ್ನುವ ಕ್ಷುಲ್ಲಕ ಕಾರಣ ನೀಡಿ ತಮ್ಮ ಪ್ರಭಾವ ಬಳಸಿ ಅವರನ್ನು ಬಂಧಿಸುವಂತೆ ಸ್ಥಳೀಯ ಪೊಲೀಸರ ಮೇಲೆ ಒತ್ತಡ ತಂದಿದ್ದಾರೆ. ಸ್ಥಳೀಯ ಪೊಲೀಸರು ತಹಸೀಲ್ದಾರ್ ಮೂಲಕ ಶಿವು ಹಾಗೂ ಗಣೇಶ್ ಎಂಬುವವರನ್ನು ಮಂಗಳವಾರ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿಕೊಂಡು, ತಹಸೀಲ್ದಾರ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ಅವರನ್ನು ಏ. 8ರವರೆಗೆ ನ್ಯಾಯಾಂಗಬಂಧನಕ್ಕೆ ಒಪ್ಪಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದರು. ಈ ಪ್ರಕರಣದಲ್ಲಿ ತಹಸೀಲ್ದಾರರು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಹೊಳೆಬಾಗಿಲಿನಲ್ಲಿ ಪ್ರತಿದಿನ ಪ್ರವಾಸಿಗರು ಹಾಗೂ ಸ್ಥಳೀಯರ ನಡುವೆ ಗಲಾಟೆಗಳು ನಡೆಯುತ್ತಾ ಇರುತ್ತವೆ. ಅವುಗಳಲ್ಲಿ ಈ ಪ್ರಕರಣವೂ ಒಂದಾಗಿದ್ದು ಮುಂದೆ ಶಾಂತಿಭಂಗ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಬೇಕಾಗಿತ್ತು.
ಆದರೆ, ಯಾರನ್ನೋ ತೃಪ್ತಿ ಪಡಿಸಲು ತಹಸೀಲ್ದಾರರು ನಿರಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಕಾನೂನುಬಾಹಿರವಾಗಿದ್ದು ಅವರು ಸಾರ್ವಜನಿಕರ ಬಳಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಸಂಘದ ಪ್ರಮುಖರು ಹಾಜರಿದ್ದರು.