ನೀರಿನ ದರ ಏರಿಕೆ ವಿರುದ್ಧ ಕೆಜೆಪಿ ಪ್ರತಿಭಟನೆ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.27
ಗೃಹ ಹಾಗೂ ವಾಣಿಜ್ಯ ಬಳಕೆ ನೀರಿನ ದರ ಏರಿಕೆ ಮಾಡಿರುವ ನಗರಸಭೆ ಆಡಳಿತದ ನಿರ್ಧಾರ ವಿರುದ್ಧ ಕೆಜೆಪಿ ದನಿ ಎತ್ತಿದೆ.
ನಗರಸಭೆಯ ನಿರ್ಧಾರ ವಿರೋಧಿಸಿ ಪಕ್ಷದ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗೃಹ ಬಳಕೆಯ ನೀರಿನ ಕಂದಾಯವನ್ನು 60ರಿಂದ 120ಕ್ಕೆ ಹಾಗೂ ವಾಣಿಜ್ಯ ಬಳಕೆಯ ನೀರಿನ ತೆರಿಗೆಯನ್ನು 120ರಿಂದ 240ಕ್ಕೆ ಏರಿಕೆ ಮಾಡಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಜನವಿರೋಧಿಯಾಗಿದೆ. ಈ ನಿರ್ಧಾರದಿಂದ ನಗರದ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಕೂಡಲೇ ಜಿಲ್ಲಾಧಿಕಾರಿಯವರು ಏರಿಕೆ ಮಾಡಿರುವ ಕುಡಿಯುವ ನೀರಿನ ಕಂದಾಯ ರದ್ದುಪಡಿಸಬೇಕು. ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಎಲ್.ರುದ್ರೇಗೌಡ, ಜ್ಯೋತಿಪ್ರಕಾಶ್, ಪುರುಷೋತ್ತಮ, ಬಿಳಕಿ ಕೃಷ್ಣಮೂರ್ತಿ, ಗೋಪಿ, ಮಹೇಂದ್ರಪ್ಪ, ಹೊನ್ನಪ್ಪ, ಚನ್ನಬಸಪ್ಪ, ಸಂತೋಷ್ ಮೊದಲಾದವರಿದ್ದರು.