ರೈತರ ಸಹಭಾಗಿತ್ವದಲ್ಲಿ ಕೆರೆ ರಕ್ಷಣೆ ಸಾಧ್ಯ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.27
ಕೆರೆಗಳ ಸಂರಕ್ಷಣೆ ರೈತರ ಸಹಭಾಗಿತ್ವದಲ್ಲಿ ಮಾತ್ರ ಸಾಧ್ಯವಿದೆ ಎಂದು ಜಲಸಂವರ್ಧನಾ ಯೋಜನಾ ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ, ಜಲಸಂವರ್ಧನಾ ಯೋಜನಾ ಸಂಘ, ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಯೋಜನಾ ಘಟಕದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕೆರೆಗಳ ಸಂರಕ್ಷಣೆ ಅಗತ್ಯ: ರಾಜ್ಯದಲ್ಲಿನ ಕೆರೆಗಳ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಲ ಸಂವರ್ಧನಾ ಯೋಜನಾ ಸಂಘದ ಮಾರ್ಗದರ್ಶನದಲ್ಲಿ ಈವರೆಗೆ ರೈತರ ಸಹಭಾಗಿತ್ವದಲ್ಲಿ ಕೆರೆಗಳ ನಿರ್ವಹಣೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಹಾಗೂ ಮುಂಬರುವ ದಿನಗಳಲ್ಲಿ ನೀರಿಗೆ ವ್ಯಾಪಕ ಹಾಹಾಕಾರ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರೆ ಸ್ವಯಂಪ್ರೇರಿತರಾಗಿ ಕೆರೆಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದರು.
ಪ್ರಕೃತಿಯ ವೈಪರಿತ್ಯದಿಂದ ಕ್ರಮೇಣ ನೀರಿನ ಅಭಾವ ಸೃಷ್ಟಿಯಾಗುತ್ತಿದೆ. ಕೃಷ್ಣರಾಜಸಾಗರದಲ್ಲೂ ಪ್ರಸಕ್ತವರ್ಷ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ರಾಜಧಾನಿ ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಂತೆಯೆ ಜಿಲ್ಲೆಯ ಸೊರಬ, ಸಾಗರ ತಾಲೂಕುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳಿರುವುದರಿಂದ ಕೆರೆಗಳ ಸಂರಕ್ಷಣೆ ಹಾಗೂ ನೀರು ನಿರ್ವಹಣೆ ಪ್ರಮುಖ ಅಂಶವಾಗಿದೆ ಎಂದು ತಿಳಿಸಿದರು.
ರೈತರೇ... ರಕ್ಷಣೆಗೆ ಮುಂದಾಗಿ: ಪೂರ್ವಜರು ಕಟ್ಟಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ, ನೀರು ಸಂಗ್ರಹಿಸುವುದರಿಂದ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಬರುವುದಿಲ್ಲ. ಆದ್ದರಿಂದ ರೈತರೇ ಸ್ವಯಂಪ್ರೇರಿತರಾಗಿ ಕೆರೆ ಸಂರಕ್ಷಣೆಗೆ ಮುಂದಾಗಬೇಕು ಹಾಗೂ ಪ್ರಸ್ತುತ ಜಲಸಂವರ್ಧನಾ ಯೋಜನಾ ಸಂಘದಿಂದ ನಿರ್ವಹಿಸಿ ಹಸ್ತಾಂತರಿಸಲಾಗಿರುವ ಕೆರೆಗಳನ್ನು ಸಂರಕ್ಷಿಸಬೇಕೆಂದು ಕರೆ ನೀಡಿದರು.
ಕೆರೆ ಬಳಕೆದಾರರ ರಾಜ್ಯ ಒಕ್ಕೂಟದ ಅಧ್ಯಕ್ಷ ಪ್ರೇಮ್ಕುಮಾರ್ಗೌಡ ಮಾತನಾಡಿ, ಅಂತರ್ಜಲ ಮಟ್ಟ ಉಳಿಸಲು ಕೆರೆ ಸಂರಕ್ಷಣೆಯ ಅಗತ್ಯವಿದ್ದು, ಇದಕ್ಕೆ ಸರ್ಕಾರ ಮತ್ತು ಸಮುದಾಯ ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒತ್ತುವರಿಯಾಗಿದ್ದ ಸಾವಿರಾರು ಕೆರೆಗಳನ್ನು ಪುನರ್ ನಿರ್ಮಿಸಿದ ಜಲಸಂವರ್ಧನಾ ಯೋಜನಾ ಸಂಘವನ್ನು ಮುಂದುವರಿಸುವ ಮೂಲಕ ಇನ್ನೂ ನಿರ್ವಹಣೆಯಾಗಬೇಕಿರುವ ಕೆರೆಗಳಿಗೆ ಕಾಯಕಲ್ಪ ನೀಡಬೇಕಿದೆ ಎಂದರು. ಜಿಲ್ಲಾ ಯೋಜನಾ ಘಟಕದ ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಅಬ್ಬಿ ಮಲ್ಲೇಶಪ್ಪ, ಖಜಾಂಚಿ ಶಾಂತಾ ಉಪಸ್ಥಿತರಿದ್ದರು. ಜಿಲ್ಲಾ ಜಲಸಂವರ್ಧನಾ ಯೋಜನಾ ಘಟಕದ ಸಮನ್ವಯಾಧಿಕಾರಿ ವೆಂಕಟೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಗ್ರಾಪಂಗೆ ಮರಳು ಹಣ ಬಿಡುಗಡೆ
ಸರ್ಕಾರ ರೂಪಿಸಿರುವ ಮರಳು ನೀತಿ ಅನ್ವಯ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸಲಾಗುತ್ತಿರುವ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯ ಆಯಾ ಗ್ರಾಮ ಪಂಚಾಯಿತಿಗಳ ಶೇ.25ರಷ್ಟು ಪಾಲು ಹಣ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಈಗಾಗಲೇ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅನುದಾನ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ಇದ್ದು, ಗಣಿಗಾರಿಕೆ ವ್ಯಾಪ್ತಿಗೊಳಪಡುವ ಗ್ರಾಮ ಪಂಚಾಯಿತಿ ಪಾಲಿನ ಹಣ ಶೀಘ್ರವೇ ತಲುಪಲಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದರು.