ರೈತರಿಗೂ ಪಿಂಚಣಿ: ಕೆಜೆಪಿ ವರಸೆ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಮಾ.27
ಕೆಜೆಪಿ ಅಧಿಕಾರಕ್ಕೆ ಬಂದರೆ ರೈತರಿಗೂ ಪಿಂಚಣಿ ಸಿಗತ್ತೆ.
ಬಿ.ಎಸ್. ಯಡಿಯೂರಪ್ಪ ಹೀಗೊಂದು ಹೊಸ ವರಸೆ ಆರಂಭಿಸಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ. ರೈತರಿಗೆ ಪಿಂಚಣಿ ನೀಡುವ ಯೋಜನೆ ತಮ್ಮ ಪಕ್ಷದ ಪ್ರಣಾಳಿಕೆಯ ಪ್ರಧಾನ ಅಂಶವಾಗಿರುತ್ತದೆ ಎಂದು ಬಿಎಸ್ವೈ ಹೇಳಿದ್ದಾರೆ. ತಾಲೂಕಿನಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದ ಅವರು ಸಭಾ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು.
ಸರ್ಕಾರಿ ನೌಕರರಿಗೆ, ಖಾಸಗಿ ಸಂಸ್ಥೆ ಉದ್ಯೋಗಿಗಳು ಹೀಗೆ ಎಲ್ಲಾ ಹಂತದ ನೌಕರರಿಗೆ ಪಿಂಚಣಿ ಯೋಜನೆಗಳಿರುತ್ತವೆ. ಜೀವನ ಸಂಜೆಯಲ್ಲಿ ಯಾರ ಅವಲಂಬನೆಯೂ ಇರದೇ ನೆಮ್ಮದಿಯ ಜೀವನ ಕಳೆಯಲು ಪಿಂಚಣಿ ಅಗತ್ಯವಾಗಿರುತ್ತದೆ. ಇಂತಹ ಸೌಲಭ್ಯ ರೈತರಿಗೆ ಇಲ್ಲ. ಇದನ್ನು ತರುವುದು ತಮ್ಮ ಪಕ್ಷದ ಕಲ್ಪನೆಯಾಗಿರುತ್ತದೆ ಎಂದು ಅವರು ಹೇಳಿದರು.
ಮಧ್ಯಮವರ್ಗಕ್ಕೂ ವಿಸ್ತರಣೆ: ಅದೇ ರೀತಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಮಧ್ಯಮ ವರ್ಗಕ್ಕೂ ವಿಸ್ತರಿಸುವ ಕಲ್ಪನೆ ನನ್ನದು ಎಂದ ಅವರು, ಭಾಗ್ಯಲಕ್ಷ್ಮಿ ಯೋಜನೆಯಿಂದ ಈಗಾಗಲೇ ಲಕ್ಷಾಂತರ ಜನ ಉಪಯೋಗ ಪಡೆದುಕೊಂಡಿದ್ದು, ಯೋಜನೆಯನ್ನು ಮಧ್ಯಮವರ್ಗಕ್ಕೂ ವಿಸ್ತರಿಸುವುದರಿಂದ ಮತ್ತಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.
ಮಹಿಳಾ ಬ್ಯಾಂಕ್ ಸ್ಥಾಪನೆ: ರಾಜ್ಯದಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆಯ ಕನಸಿದೆ. ಅಧಿಕಾರಕ್ಕೆ ಬಂದರೆ ಖಂಡಿತಾ ಮಹಿಳಾ ಬ್ಯಾಂಕ್ ಆರಂಭಿಸಲು ಅಗತ್ಯವಾದ ಕ್ರಮಕೈಗೊಳ್ಳುತ್ತೇನೆ. ಅದಕ್ಕಾಗಿ ಒಂದು ಸಾವಿರ ಕೋಟಿ ರುಪಾಯಿಯನ್ನು ಕಾಯ್ದಿರಿಸುತ್ತೇನೆ. ಇದರ ಮೂಲಕ ಮಹಿಳೆಯರೂ ಸ್ವಾವಲಂಬನೆಯಾಗಲು ಸಹಕಾರಿಯಾಗುತ್ತದೆ ಎಂದರು.
ನಾನು ಸಿಎಂ ಆಗಿದ್ದ ಮೂರುವರೆ ವರ್ಷದ ಸಾಧನೆಯನ್ನು ಒಮ್ಮೆ ಯೋಚಿಸಿ. ಎಷ್ಟೆಲ್ಲಾ ಜನಪರ ಕಾರ್ಯಕ್ರಮಗಳು ಮೂಡಿಬಂದವು ಎಂದು ಮನನ ಮಾಡಿಕೊಳ್ಳಿ ಎಂದ ಅವರು, ಮತ್ತೆ ಅಧಿಕಾರಕ್ಕೇರಿದರೆ ಮುಂದಿನ ದಿವಸದಲ್ಲಿ 2 ಲಕ್ಷ ಕೋಟಿ ಬಜೆಟ್ ಮಾಡುವ ಕನಸು ನನ್ನದು ಎಂದು ತಿಳಿಸಿದರು.
ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಡಿ ಅಶೋಕ್, ಜಿ.ಪಂ.ಸದಸ್ಯ ಈಶ್ವರಪ್ಪ, ಬಂಗಾರ ನಾಯಕ್, ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಸಿದ್ದರಾಮಣ್ಣ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ನಿವೇದಿತಾ ರಾಜು, ತಾ.ಪಂ.ಮಾಜಿ ಅಧ್ಯಕ್ಷ ಜ್ಯೋತಿ ರಮೇಶ್ ಮತ್ತಿತರರು ಇದ್ದರು. ಪುನೇದಹಳ್ಳಿಯಿಂದ ಆರಂಭವಾದ ಪ್ರಚಾರ ಯಾತ್ರೆ, ಬಸವನನಂದಿಹಳ್ಳಿಗೆ ಕೊನೆಗೊಂಡಿತು. ಸುಮಾರು 14 ಕಡೆಗಳಲ್ಲಿ ಕಾರ್ಯಕ್ರಮ ನಡೆಯಿತು.