ಆಹಾರ ಧಾನ್ಯದಲ್ಲಿ ಹುಳು: ತನಿಖೆಗೆ ಆಗ್ರಹ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.28
ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಲೋಪವೆಸಗಿರುವ ಶಿಕ್ಷಣಾಧಿಕಾರಿ, ಸಹಾಯಕ ನಿರ್ದೇಶಕರು, ಶಿಕ್ಷಣ ಸಂಯೋಜಕರು, ಸಮೂಹ ಸಂಪನ್ಮೂಲ ವ್ಯಕ್ತಿ, ಕೆಎಫ್ಸಿಎಸ್ಸಿ ವ್ಯವಸ್ಥಾಪಕರು ಮತ್ತು ಸಹಾಯಕ ವ್ಯವಸ್ಥಾಪಕರನ್ನು ತಕ್ಷಣವೇ ಅಮಾನತುಗೊಳಿಸಿ ಇಡೀ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ತ್ಯಾಜವಳ್ಳಿ, ಹಾರ್ನಹಳ್ಳಿ ಕ್ಲಸ್ಟರ್ಗಳಿಗೆ ಪಡಿತರ ಸರಬರಾಜು ಮಾಡುವಾಗ ದಸಂಸ ಕಾರ್ಯಕರ್ತರು ತಡೆದು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ಕಡಿಮೆ ತೂಕ ಹಾಗೂ ಹುಳುಗಳು ಪತ್ತೆಯಾಗಿವೆ. ಸರಬರಾಜುದಾರರ ಜತೆಗಿದ್ದ ಬಿಲ್ಲಿಗೂ, ಅಲ್ಲಿದ್ದ ಧಾನ್ಯಕ್ಕೂ ತಾಳೆಯಾಗುತ್ತಿರಲಿಲ್ಲ.
ಕಾಳಸಂತೆಯಲ್ಲಿ ಮಾರಾಟ: ವಾಹನದಲ್ಲಿ ಮಾರ್ಗಾಧಿಕಾರಿ ಇರಲಿಲ್ಲ. ನಿಗದಿಪಡಿಸಿದ ದಿನಕ್ಕಿಂತ ಮುಂಚೆಯೇ ಶಾಲೆಗಳಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ.
ಅಕ್ಷರ ದಾಸೋಹಕ್ಕೆ ಪಂಜಾಬ್ ಮತ್ತು ಹರಿಯಾಣದಿಂದ ಗುಣಮಟ್ಟದ ಅಕ್ಕಿ ಸರಬರಾಜಾಗುತ್ತಿದ್ದು ಎಫ್ಕೆಸಿಸಿಐ ಸಗಟು ಮಳಿಗೆಯ ವ್ಯವಸ್ಥಾಪಕ ಮಂಜುನಾಥ್, ಆನಂದ್ ಮತ್ತು ಅಕ್ಷರದಾಸೋಹ ಬಿಸಊಿಟದ ಅಧಿಕಾರಿಗಳಾದ ಲೋಹಿತ್ ಹಾಗೂ ವಿರೂಪಾಕ್ಷಪ್ಪ ಇವರುಗಳ ಗುಣಮಟ್ಟದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಕಳಪೆ ಗುಣಮಟ್ಟದ ಅಕ್ಕಿಯನ್ನು ಅಕ್ಷರ ದಾಸೋಹದ ಬಿಸಿಯೂಟಕ್ಕೆ ಸರಬರಾಜು ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ದಸಂಸ ಹೇಳಿದೆ.
ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾಧಿಕಾರಿಯವರು ಮೌಖಿಕ ಸೂಚನೆ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯದಾಗಿದೆ.
ಇದು ಕೇವಲ ಶಿವಮೊಗ್ಗ ತಾಲ್ಲೂಕಿನದ್ದಲ್ಲ, ಜಿಲ್ಲೆಯಾದ್ಯಂತ ವ್ಯಾಪಿಸಿರುವ ಗುಮಾನಿಯು ಇದೆ. ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ದಾಖಲೆಗಳು ಒಂದಕ್ಕೊಂದು ತಾಳೆ ಇಲ್ಲದಿರುವುದು ಕಂಡು ಬರುತ್ತದೆ ಮತ್ತು ಇದು ಬಹಳ ಹಿಂದಿನಿಂದಲೂ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ ಎಂಬುದಕ್ಕೆ ಈ ಅಂಶಗಳೇ ಜ್ವಲಂತ ಸಾಕ್ಷಿಯಾಗಿವೆ. ಸರಬರಾಜುದಾರರೂ ಸಹ ಟೆಂಡರ್ ಸಲ್ಲಿಸುವಾಗ ಮಾಹಿತಿ ಕೊಟ್ಟ ಲಾರಿಗಳನ್ನು ಬಿಟ್ಟು ಬೇರೆ ಲಾರಿಗಳನ್ನು ಬಳಸುತ್ತಿದ್ದಾರೆ. ಇವರನ್ನು ಕಪ್ಪುಪಟ್ಟಿಗೆ ಸೇರಿಸಿ ಭದ್ರತಾ ಹಣ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದೆ.
ಜಿಪಂ ಸಿಇಒ ಸೆಂಥಿಲ್ ಅವರಿಗೆ ಮನವಿ ಸಲ್ಲಿಸಲಾಯಿತು. ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂತಿ, ಮುಖಂಡರಾದ ಹಾಲೇಶಪ್ಪ, ಹನುಮಂತಪ್ಪ ಮತ್ತಿತರರು ಹಾಜರಿದ್ದರು.