ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಕ್ರಮ ಅಕ್ಕಿ ಸಾಗಣೆ: ಮೂವರ ಬಂಧನ

Rashmi Kasaragodu
Updated On : 30 Mar 2013, 11:49 am

ಶಿವಮೊಗ್ಗ: ಸರ್ಕಾರಿ ನ್ಯಾಯಬೆಲೆ ಅಂಗಡಿಯಿಂದ ಅಕ್ರಮವಾಗಿ ದಿನಸಿ ಅಂಗಡಿಯೊಂದಕ್ಕೆ ಮಾರಾಟ ಮಾಡಲು  ಸಾಗಿಸುತ್ತಿದ್ದ ಸಾವಿರಾರು ರುಪಾಯಿ ಮೌಲ್ಯದ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ಆಲ್ಕೊಳ ಸಮೀಪ ನಡೆದಿದೆ.
ವಿನೋಬ ನಗರದಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಪವಿತ್ರಪ್ಪ(55), ಟೆಂಪೋ ಟ್ರ್ಯಾಕ್ಸ್ ಚಾಲಕ ರೆಹಮಾನ್ (35) ಹಾಗೂ ದಿನಸಿ ಅಂಗಡಿ ಮಾಲೀಕ ತೌಷಿಬ್ ಬಂಧಿತ ಆರೋಪಿಗಳು. ಇಲ್ಲಿನ ವಿನೋಬನಗರದ ನ್ಯಾಯಬೆಲೆ ಅಂಗಡಿ  ಕಾರ್ಯದರ್ಶಿ ಪವಿತ್ರಪ್ಪ ಸುಮಾರು 50 ಚೀಲ ಅಕ್ಕಿಯನ್ನು ಸಾಗಾಣೆ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು  ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾದರು. 50 ಅಕ್ಕಿ ಚೀಲಗಳ ಮೌಲ್ಯ ಸುಮಾರು 25 ಸಾವಿರ ಎಂದು ಅಂದಾಜಿಸಲಾಗಿದೆ.  
ಪ್ರಕರಣ ವಿನೋಬನಗರ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಾರ್ಯಚರಣೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ವಿನೋಬನಗರ ಠಾಣೆ ಪಿಎಸ್ಐ ಮಂಜುನಾಥ್, ಸಿಬ್ಬಂದಿ ಇದ್ದರು. ಇನ್ನೊಂದೆಡೆ ಈ ಅಕ್ಕಿ ಹರಿಯಾಣ- ಪಂಜಾಬ್ನಿಂದ ಬಂದಿದ್ದು, ಶಾಲಾ ಮಕ್ಕಳ ಬಿಸಿಯೂಟ ಯೋಜನೆ ಬಳಕೆಗಾಗಿ  ಬಂದಿತ್ತು ಎಂಬ ಮಾಹಿತಿಯೂ ಇದೆ.
ಸರ ಅಪಹರಣ
ಶಿವಮೊಗ್ಗ: ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯೊಬ್ಬರ ಸರ ಅಪಹರಿಸಿ ಪರಾರಿಯಾದ ಘಟನೆ ವಿನೋಬನಗರದಲ್ಲಿ ನಡೆದಿದೆ.
ಇಲ್ಲಿನ ನಿವೃತ್ತ ಶಿಕ್ಷಕಿ ಎಸ್. ಶಾಂತಾಬಾಯಿ ಸರ ಕಳೆದುಕೊಂಡವರು. ಇವರು ತಮ್ಮ ಸಹೋದರರನ್ನು ಮನೆಯ ಸಮೀಪದ ಪೊಲೀಸ್ ಚೌಕಿ ಬಸ್ ನಿಲ್ದಾಣಕ್ಕೆ ಬಿಡಲು ನಡೆದು ಬರುತ್ತಿರುವಾಗ ಬೈಕ್ನಲ್ಲಿ ಬಂದ  ಇಬ್ಬರು ಅಪರಿಚಿತರು ಏಕಾಏಕಿ ಸರಕ್ಕೆ ಕೈ ಹಾಕಿ ಎಳೆದು ಅಪಹರಿಸಿ ಪರಾರಿಯಾದರು. ಸರದ ಮೌಲ್ಯ  ಸುಮಾರು ರು. 80 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಡಯಾಯಿತಿಗೆ ಯತ್ನ: 6 ಮಂದಿ ಬಂಧನ
ಶಿವಮೊಗ್ಗ: ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜನರನ್ನು ಹೆದರಿಸಿ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪದ ಮೇರೆಗೆ 6 ಜನರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ತೀರ್ಥಹಳ್ಳಿ ರಸ್ತೆಯ ಹರಕರೆ ಕಾನಹಳ್ಳದ ಚೌಡಮ್ಮ ದೇವಸ್ಥಾನದ ಬಳಿ ನಡೆದಿದೆ.  ಬಂಧಿತ ಆರೋಪಿಗಳು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನವರಾಗಿದ್ದಾರೆ. ಭೈರಪುರ ಗ್ರಾಮದ ನಾಗನಾಯ್ಕ್ (45), ರವಿನಾಯ್ಕ್ (24), ಮಂಜುನಾಯ್ಕ್ (28),  ಅಜ್ಗರ್ (32), ಬಾಬು (28) ಹಾಗೂ ಭಾಸ್ಕರ್ (28) ಅವರನ್ನು ಬಂಧಿಸಲಾಗಿದೆ. ತೀರ್ಥಹಳ್ಳಿಯ ಮಾರಕಾಸ್ತ್ರ ಹಿಡಿದು ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರನ್ನು ಕಂಡು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಬೆನ್ನಟ್ಟಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾಗಿದೆ.
45 ಕುರಿ ಸಾವು
ಶಿರಾಳಕೊಪ್ಪ: ಶಿರಾಳಕೊಪ್ಪ ಹತ್ತಿರದ ಮುಳಕೊಪ್ಪ ತಾಂಡದ ಬಳಿ ಮೇಯುತ್ತಿದ್ದ 45 ಕುರಿಗಳು ಏಕಾಏಕಿ ಸಾವನ್ನಪ್ಪಿ ಹಲವು ಕುರಿಗಳು ಅಸ್ವಸ್ಥವಾಗಿರುವ ಘಟನೆ ಸಂಭವಿಸಿದೆ.
ಎಂದಿನಂತೆ ಕುರಿಗಳು ಮೇಯುತ್ತಿದ್ದಾಗ ಇದ್ದಕ್ಕಿದಂತೆ ಅಸ್ವಸ್ಥವಾಗಿ ಹಲವು ಕುರಿಗಳು ಸಾವನ್ನಪ್ಪಿವೆ. ಈ ಘಟನೆಯಿಂದ ಕುರಿಮಾಲಿಕ ವಾಸಪ್ಪ ಸಿಗಾಡೆಪ್ಪ ಕವಣಿ ಆತಂಕಗೊಂಡಾಗ ಗ್ರಾಮದ ಕೆಲವರು ಶಿರಾಳಕೊಪ್ಪ ಪಶು ಚಿಕಿತ್ಸಾಲಯಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ವೈದ್ಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಸಹಾಯಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಶಂಕರನಾಯ್ಕ್ ಸ್ಥಳಕ್ಕೆ ಬಂದು ಕುರಿಗಳಿಗೆ ಚುಚ್ಚುಮದ್ದು ನೀಡಿದ್ದಾರೆ. ಆದರೂ ಕುರಿಗಳ ಸಾವು ಮುಂದುವರೆದು 45 ಕುರಿ ಸಾವನ್ನಪ್ಪಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement