ಆರ್ಸಿ-ಕೆಎಸ್ಸಿಎ 7 ಅಕಾಡೆಮಿ ಆರಂಭ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.29 ಆರ್ಸಿ-ಕೆಎಸ್ಸಿಎ ಅಕಾಡೆಮಿ ಶುಕ್ರವಾರ ಶಿವಮೊಗ್ಗದಲ್ಲಿ ಉದಯವಾಗಿದೆ.
ನವುಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೈದಾನದಲ್ಲಿ ಅಕಾಡೆಮಿಯ ನೂತನ ಆವರಣವನ್ನು ಹಿರಿಯ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹಾಗೂ ಸೈಯದ್ ಕಿರ್ಮಾನಿ ಹಾಜರಿದ್ದರು.
ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಾವಗಲ್ ಶ್ರೀನಾಥ್, ಆರ್ಸಿ- ಕೆಎಸ್ಸಿಎ ಏಳನೇ ಅಕಾಡೆಮಿಯ ಆರಂಭವಿದು. ಸ್ಥಳೀಯ ಕ್ರಿಕೆಟ್ ಆಸಕ್ತ ಹುಡುಗರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಶಾಲೆಯಂತೆ ಕೆಲಸ: ಅಕಾಡೆಮಿಯ ಚಟುವಟಿಕೆ ಒಂದು ಶಾಲೆಯಂತೆ ಕಾರ್ಯನಿರ್ವಹಿಸುತ್ತದೆ. ತಂತ್ರಜ್ಞಾನ ಬಳಸಿಕೊಂಡು ಆಟವನ್ನು ತಿದ್ದಲಾಗುತ್ತದೆ. ಜೊತೆಗೆ ಪ್ರತಿ ಹುಡುಗನಿಗೂ ಜೀವನ ಮೌಲ್ಯಗಳನ್ನು ಹೇಳಿಕೊಡುತ್ತದೆ. ಉತ್ಸಾಹ ತುಂಬಿ ಹೆಚ್ಚಿನ ಪ್ರದರ್ಶನಕ್ಕೆ ಅವಕಾಶ ನೀಡುತ್ತದೆ ಎಂದು ಹೇಳಿದರು.
ವಿದೇಶಗಳಲ್ಲಿ ಕ್ರೀಡೆ ಕಲೆಯ ಒಂದು ಭಾಗ. ಆದರೆ, ನಮ್ಮ ದೇಶದಲ್ಲಿ ಹಾಗಿಲ್ಲ. ಓದಿಗೆ ಹೆಚ್ಚು ಒತು ್ತಕೊಡುತ್ತಿರುವ ಸಂದರ್ಭದಲ್ಲಿ ಆಟದಿಂದಲೂ ಹೆಚ್ಚಿನ ಅವಕಾಶವಿದೆ, ಅದರಲ್ಲೂ ಒದಿನ ಜೊತೆಗೆ ಕ್ರಿಕೆಟ್ನಲ್ಲಿ ತೊಡಗುವುದರಿಂದ ವೈಯಕ್ತಿಕವಾಗಿ ಲಾಭವಾಗುತ್ತದೆ ಎಂದು ತಿಳಿಸಿದರು.
ಸುಂದರವಾದ ಎರಡು ಪಿಚ್ಗಳು ಜೊತೆಗೆ ಹೊಸದಾಗಿ ಆಟಗಾರರಿಗೆಂದೇ ಇಲ್ಲಿ ಜಿಮ್ ಆರಂಭಿಸಲಾಗುತ್ತದೆ. ವಸತಿಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಇದನ್ನು ಬಳಸಿಕೊಂಡು ಹೆಚ್ಚಿನ ಸಾಧನೆ ಮಾಡುವಂತೆ ಅವರು ಕ್ರಿಕೆಟ್ ಪಟುಗಳಿಗೆ ಸಲಹೆ ನೀಡಿದರು.
ಉತ್ತಮ ತರಬೇತಿ: ಶಾಲೆ, ಕಾಲೇಜು, ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಲೀಗ್ ಕ್ರಿಕೆಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ 16 ಹಾಗೂ 19 ವರ್ಷ ವಯೋವುತಿಯೊಳಗಿನ ಆಟಗಾರರು ಈ ಅಕಾಡೆಮಿಯ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಆರ್. ವಿಶ್ವನಾಥ್, ಕಿರ್ಮಾನಿಯವರೊಂದಿಗೆ, ಎ.ವಿ. ಶಶಿಧರ್, ಜಸ್ವಂತ್, ಡಿ.ಆರ್.ನಾಗರಾಜ್, ಡಿ.ಎಸ್. ಅರುಣ್ ಮೊದಲಾದರು ಹಾಜರಿದ್ದರು. ವೈಭವದ ದಿನಗಳನ್ನು ನೆನಪಿಸಿ ಆ ಕ್ಷಣ: ಆರ್ಸಿ- ಕೆಎಸ್ಸಿಎ ಅಕಾಡೆಮಿಯ ಪ್ರಾಕ್ಟಿಸ್ ಪಿಚ್ ಉದ್ಘಾಟನೆಯ ಸಂದರ್ಭವದು. ಉದ್ಘಾಟನಾರ್ಥ, ಜಿ.ಆರ್.ವಿಶ್ವನಾಥ್ ಕೈಗೆ ಗ್ಲೌಸ್ ಏರಿಸಿ ಬ್ಯಾಟ್ ಎತ್ತಿ ಸ್ಕ್ರೀಸ್ನತ್ತ ನಡೆದರು. ಜೊತೆಗೆ ಯಾರು ಯಾವು ಬಾಲ್ ಹಾಕ್ತೀರೋ ಹಾಕಿ ನೋಡ್ಕೋತಿನಿ ಎನ್ನುತ್ತಲೇ ಕ್ರೀಸ್ ಬಳಿ ಬ್ಯಾಟ್ ಕುಟ್ಟಿ ಬ್ಯಾಟಿಂಗ್ಗೆ ರೆಡಿಯಾದರು.
ಅತ್ತ ಆರ್ಸಿ ತಂಡದ ಹುಡುಗರು ಬಾಲ್ ಎಸೆಯುತ್ತಿದ್ದಂತೆ ತಮ್ಮ ಕಲಾತ್ಮಕ ರಕ್ಷಣಾತ್ಮಕ ಹೊಡೆತಗಳನ್ನು ಹೊಡೆಯುತ್ತಿದ್ದಂತೆ ಅಲ್ಲಿ ಸೇರಿದ್ದ ಹಿರಿಯರು ಒಂದಿನಿತು ಗಂಭೀರವಾದರು. ಈ ಹಿಂದೆ ವಿಶ್ವನಾಥ್ ಆಟವನ್ನು ಕಂಡಿದ್ದ ಕಣ್ಣುಗಳು ಒಂದು ಕ್ಷಣ ಎವಯಿಕ್ಕದೇ ನೋಡಿ ಆನಂದಪಟ್ಟವು.
ಜೊತೆಗೆ ವೇದಿಕೆಯಲ್ಲಿ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ನಾನು ಕಬ್ಬಿಣದ ವಿಕೆಟ್ನಲ್ಲಿ ಆಡಿದವನು, ಭದ್ರಾವತಿ ನನ್ನ ಹುಟ್ಟೂರು. ಇದೀಗ ಈ ವ್ಯಾಪ್ತಿಯಲ್ಲಿ 5-6 ಟರ್ಫ್ ಪಿಚ್ ಸಿದ್ಧಗೊಂಡಿದ್ದು ನನಗಂತೂ ಖುಷಿಕೊಟ್ಟಿದೆ. ಇಲ್ಲಿನ ಹುಡುಗರು ಈ ಸೌಲಭ್ಯ ಬಳಸಿಕೊಂಡು ತಮ್ಮ ಪ್ರತಿಭೆ ಹೊರಹಾಕಿ ಯಶಸ್ಸು ಪಡೆಯಲಿ ಎಂದರು.
ಪ್ರಾಕ್ಟಿಸ್ ಪಿಚ್ ಉದ್ಘಾಟನೆ ಸಂದರ್ಭದಲ್ಲೇ ಮತ್ತೊಂದು ರಂಜನೆಯ ಕ್ಷಣ. ಜವಾಗಲ್ ಶ್ರೀನಾಥ್ ಗ್ಲೌಸ್ ತೊಟ್ಟು ಕ್ರೀಸ್ನತ್ತ ಆಗಮಿಸಿದರು. ಈ ಸಂದರ್ಭದಲ್ಲಿ ಸುತ್ತಮುತ್ತ ನಿಂತಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಎಲ್ಲಾ ಸೈಡಿಗೆ ಹೋಗ್ರಪ್ಪ, ನಾನು ಪಿಂಚ್ ಹಿಟರ್ ಗೊತ್ತಲ್ಲಾ ... ಎಂದಾಗ ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು.
ಅಂತಾರಾಷ್ಟ್ರೀಯ ಪಂದ್ಯ ಸದ್ಯಕ್ಕಿಲ್ಲ
ಶಿವಮೊಗ್ಗದ ಕ್ರಿಕೆಟ್ ಪಿಚ್ ಅಂತಾರಾಷ್ಟ್ರೀಯ ಮಟ್ಟದ್ದು. ಇದರಲ್ಲಿ ಎರಡು ಮಾತಿಲ್ಲ. ಹಾಗಂತ ಸದ್ಯಕ್ಕಂತೂ ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳು ನಡೆಯಲು ಸಾಧ್ಯವಿಲ್ಲ ಎಂದು ಜಾವಗಲ್ಶ್ರೀನಾಥ್ ಹೇಳಿದರು.
ಶಿವಮೊಗ್ಗ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಸಲು ಮುಖ್ಯವಾಗಿ ಭದ್ರತಾ ಸಮಸ್ಯೆ ಎದುರಾಗಲಿದೆ. ನೂತನ ಕ್ರೀಡಾಂಗಣವಾಗಿರುವುದರಿಂದ ಇಲ್ಲಿನ ಸುರಕ್ಷತಾ ವ್ಯವಸ್ಥೆ ಉನ್ನತ ಮಟ್ಟದಲ್ಲಿಲ್ಲ. ಇದು ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಸುವುದಕ್ಕೆ ದೊಡ್ಡ ತೊಡಕಾಗಿದೆ ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ಕ್ರೀಡಾಂಗಣಗಳಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಯಿರುತ್ತದೆ. ಇದಕ್ಕಾಗಿಯೇ ಕೋಟ್ಯಂತರ ರು. ವೆಚ್ಚ ಮಾಡಲಾಗುತ್ತದೆ. ಬೆಂಗಳೂರಿನ ಪಂದ್ಯಕ್ಕೆ ಅಂದಾಜು 3,000 ಪೊಲೀಸರು ರಕ್ಷಣೆಗಾಗಿ ಅವಶ್ಯಕತೆ ಇರುತ್ತದೆ. ಹೀಗಾಗಿ ಶಿವಮೊಗ್ಗ ಕ್ರೀಡಾಂಗಣದಲ್ಲಿ ಆ ಮಟ್ಟದ ವ್ಯವಸ್ಥೆಯಿಲ್ಲ. ಹಂತಹಂತವಾಗಿ ಕ್ರೀಡಾಂಗಣ ಮೇಲ್ದರ್ಜೆಗೇರಿದ ನಂತರ ಎಲ್ಲ ರೀತಿಯ ಪಂದ್ಯಾವಳಿಗಳನ್ನು ಇಲ್ಲಿ ನಡೆಸಬಹುದಾಗಿದೆ ಎಂದರು.