ಇಂದು ಗಣೇಶನಿಗೆ ಕ್ಷೀರಾಭಿಷೇಕ
ಸೊರಬ: ಸಂಕಷ್ಟಹರ ಚತುರ್ಥಿ ಅಂಗವಾಗಿ ಇಂದು ಶನಿವಾರ ಬೆಳಿಗ್ಗೆ 9 ರಿಂದ ಇಲ್ಲಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಥರ್ವಶೀರ್ಷ, ಕ್ಷೀರಾಭಿಷೇಕ, ಸಹಸ್ರ ಮೋದಕ ಹವನ, ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ ನಡೆಯಲಿದ್ದು, ಗಜಾನನ ಯುವಕ ಸಂಘದಿಂದ ಪ್ರಸಾದ ವಿತರಣೆ ನಡೆಯುತ್ತದೆ. ಸೇವಾಕರ್ತರು ಹೆಚ್ಚಿನ ವಿಷಯಗಳಿಗೆ ದೇಗುಲದ ಅರ್ಚಕರನ್ನು ಸಂಪರ್ಕಿಸಬಹುದಾಗಿದೆ.
ಇಂದು ತಾಲೂಕು ಜೆಡಿಎಸ್ ಸಭೆ
ಹೊಸನಗರ: ಪಟ್ಟಣದ ಗಾಯತ್ರಿ ಮಂದಿರದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆ ಆಯೋಜಿಸಿದೆ. ಶನಿವಾರ ಬೆಳಿಗ್ಗೆ 11ಕ್ಕೆ ಸಭೆ ಆರಂಭಗೊಳ್ಳಲಿದ್ದು ರಾಜ್ಯ ಯುವಜನತಾದಳದ ಅಧ್ಯಕ್ಷ ಮಧುಬಂಗಾರಪ್ಪ, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸೇರಿದಂತೆ ಹಲವರು ಭಾಗವಹಿಸುವರು.
ಯಕ್ಷಗಾನ ಪ್ರದರ್ಶನ
ಸಾಗರ: ಇಲ್ಲಿನ ಯಕ್ಷಮಿತ್ರರು ಸಂಯೋಜನೆಯಲ್ಲಿ 30 ರ ರಾತ್ರಿ 9.30 ರಿಂದ ನೆಹರೂ ಮೈದಾನದಲ್ಲಿ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರಿಂದ ಅದ್ದೂರಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ರಾಣಿ ಶಶಿಪ್ರಭೆ- ಗದಾಯುದ್ಧ-ಲವಕುಶ ಪ್ರಸಂಗಗಳು ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ರಾಘವೇಂದ್ರ ಆಚಾರಿ, ಶಂಕರಭಟ್ ಬ್ರಹ್ಮೂರು, ಶಂಕರ ಭಾಗವತ್, ಮುಮ್ಮೇಳದಲ್ಲಿ ವಿದ್ಯಾಧರ ಜಲವಳ್ಳಿ, ಥಂಡಿಮನೆ, ತೀರ್ಥಳ್ಳಿ, ನೀಲ್ಕೋಡು, ಕಣ್ಣಿಮನೆ, ಭಾಸ್ಕರ ಜೋಶಿ, ಕ್ಯಾದಗಿ, ದೇವಾಡಿಗ, ಕಡಬಾಳ, ತೊಂಬಟ್ಟು ಮುಂತಾದ ಖ್ಯಾತ ಕಲಾವಿದರು ಭಾಗವಹಿಸುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.
ವಿಪ್ರ ಮಹಿಳಾ ಬಜಾರ್
ಶಿವಮೊಗ್ಗ: ವಿಪ್ರ ಟ್ರಸ್ಟ್ ಸಮಾಜದ ಅನೇಕ ಮಹಿಳೆಯರ ಗೃಹ ಉತ್ಪನ್ನಗಳನ್ನು ಮಾರಾಟ ಮಾಡಲು ವಿಪ್ರ ಮಹಿಳಾ ಬಜಾರ್ ತೆರೆಯಲು ನಿರ್ಧರಿಸಿದೆ. ಪ್ರತಿ ತಿಂಗಳ ಮೊದಲ ಮಂಗಳವಾರ ಮಧ್ಯಾಹ್ನ 3ರಿಂದ 8 ಗಂಟೆವರೆಗೆ ವಿನೋಬನಗರದ ವಿಪ್ರ ಸಭಾಭವನದಲ್ಲಿ ಈ ಬಜಾರ್ ನಡೆಯಲಿದೆ. ಏ.2ರಂದು ಮಧ್ಯಾಹ್ನ 2.30ಕ್ಕೆ ಮಹಿಳಾ ಬಜಾರ್ನ್ನು ಜಿಲ್ಲೆಯ ಮಹಿಳಾ ಉದ್ಯಮಿ, ಮಥುರಾ ಪ್ಯಾರಡೈಸ್ನ ಲಕ್ಷ್ಮಿದೇವಿ ಗೋಪಿನಾಥ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹಿಳಾ ಮುಖಂಡರಾದ ರಮಾ ಗೋಪಾಲ್, ಮಧುಮತಿ ಮಂಜುನಾಥ್ ಮತ್ತಿತರು ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಟ್ರಸ್ಟಿ ಪಿ.ಎ. ಸುಮಿತ್ರಮ್ಮ ವಹಿಸುವರು.