ಕೆಎಸ್ಸಿಎನಿಂದ ಕ್ರಿಕೆಟ್ ತರಬೇತಿಗೆ ಚಾಲನೆ
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.29
ಆರ್ಸಿ- ಕೆಎಸ್ಸಿಎ ಅಕಾಡೆಮಿಯ ನೂತನ ಆವರಣ ಉದ್ಘಾಟನೆಯೊಂದಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಅಧಿಕೃತವಾಗಿ ಶಿವಮೊಗ್ಗದಲ್ಲಿ ತರಬೇತಿ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ.
ನವುಲೆಯ ಕೆಎಸ್ಸಿಎ ಮೈದಾನ ತರಬೇತಿ ನಡೆಯುವ ಸ್ಥಳ. ಸ್ಥಳೀಯ ಉದಯೋನ್ಮುಖ ಕ್ರಿಕೆಟ್ ಆಟಗಾರರು ತಮ್ಮ ಪ್ರತಿಭೆಯನ್ನು ಮತ್ತಷ್ಟು ಉನ್ನತಿಗೊಳಿಸಲು ಮತ್ತು ಉತ್ತಮ ಪ್ರದರ್ಶನ ನೀಡಲು ಒಂದು ವೇದಿಕೆ ನಿರ್ಮಿಸಲು ಅಕಾಡೆಮಿಯನ್ನು ಇಲ್ಲಿ ಸ್ಥಾಪಿಸಲಾಗಿದೆ ಎಂದು ಕೆಎಸ್ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕಾಡೆಮಿ ಹಾಗೂ ಇಲ್ಲಿ ನಡೆಯುವ ತರಬೇತಿ ಕುರಿತು ಮಾಹಿತಿ ನೀಡಿದರು.
ಬಾಲಕರು ಕ್ರೀಡೆ ಮತ್ತು ಶಿಕ್ಷಣವನ್ನು ಜೊತೆ ಜೊತೆಯಾಗಿ ನಿರ್ವಹಣೆ ಮಾಡಲು ಸಹಾಯ ಮಾಡುವುದು, ಟರ್ಫ್ ಪಿಚ್, ಹಚ್ಚ ಹಸಿರು ಆಟದ ಮೈದಾನ ಮತ್ತಿತರ ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ನೀಡುವುದು, ಆಟವನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ತಾಂತ್ರಿಕತೆ ಬಳಸುವುದು, ಆಟಗಾರರ ವ್ಯಕ್ತಿತ್ವದಲ್ಲಿ ಸರ್ವಾಂಗೀಣ ಅಭಿವೃದ್ಧಿ ಬೆಳೆಸುವುದು ಅಕಾಡೆಮಿಯ ಧ್ಯೇಯೋದ್ದೇಶ ಎಂದರು.
ಆಟಗಾರರ ಪೂರೈಕೆ: ಶಾಲೆ, ಕಾಲೇಜುಗಳು ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಲೀಗ್ ಕ್ರಿಕೆಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ 16 ಹಾಗೂ 19 ವರ್ಷ ವಯೋವುತಿಯೊಳಗಿನ ಆಟಗಾರರು ಇಲ್ಲಿ ಪಾಲ್ಗೊಳ್ಳಬಹುದು. ಬೇಸಿಗೆ ಶಿಬಿರಗಳು, ವರ್ಷಪೂರ್ತಿ ನಡೆಯುವ ಶಿಬಿರಗಳಿಗೆ ಆಟಗಾರರನ್ನು ಪೂರೈಸುವ ಶಿಬಿರಗಳಾಗಿ ಕಾರ್ಯನಿರ್ವಹಿಸುತ್ತವೆ.
ಸೋಮವಾರದಿಂದ ಗುರುವಾರದವರೆಗೆ ವಾರದಲ್ಲಿ ನಾಲ್ಕು ದಿನ ತರಬೇತಿ ನೀಡಲಾಗುತ್ತದೆ. ಆಟಗಾರರು ತಮ್ಮ ಶೈಕ್ಷಣಿಕ ಚಟುವಟಿಕೆ ಮತ್ತು ವಾರಾಂತ್ಯದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಸಮದೂಗಿಸಲು ಈ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಎಲ್ಲಾ ಅಕಾಡೆಮಿಯಲ್ಲಿ ಸೇರಿ ಒಟ್ಟು 225 ತರಬೇತುದಾರರಿದ್ದು, ಅವರಿಗೂ ಪ್ರತ್ಯೇಕ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವಾರದಲ್ಲಿ 4 ದಿನ: ಆಟಗಾರರಿಗೆ ಪರೀಕ್ಷೆ ಸಿದ್ಧತೆ ನಡೆಸಲು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ಮೂರು ತಿಂಗಳು ಹೊರತುಪಡಿಸಿ ಅಕಾಡೆಮಿ ವರ್ಷಪೂರ್ತಿ ನಡೆಯುವುದು. ಅಕಾಡೆಮಿಯ ಭೌತಿಕ ರಚನೆ ಮಾತ್ರ ನಿರಂತರ ಪ್ರಗತಿಯಲ್ಲಿರುತ್ತದೆ.
ವಾರದಲ್ಲಿ ನಾಲ್ಕು ದಿನ ಅಕಾಡೆಮಿ ಮಧ್ಯಾಹ್ನ 3.30ರಿಂದ 6.30ರವರೆಗೆ ನಡೆಯುವುದು. ಆದರೆ, ಶಾಲೆಗಳ ವೇಳಾಪಟ್ಟಿಗನುಗುಣವಾಗಿ ತರಬೇತುದಾರರು ವಿಧೇಯರಾಗಿ ಬಾಲಕರ ಅವಶ್ಯಕತೆಗೆ ಅನುಗುಣವಾಗಿ ಅನುವು ಮಾಡಿಕೊಡಲಿದ್ದಾರೆ ಎಂದು ಹೇಳಿದರು.
ಪ್ರಮುಖವಾಗಿ ಜಸ್ವಂತ್, ಅನಂತ್, ಪಿ.ವಿ. ಶಶಿಕಾಂತ್ ಸೇರಿದಂತೆ ಡೇವಿಡ್ ಜಾನ್ಸನ್, ದೊಡ್ಡ ಗಣೇಶ್ ಅವರನ್ನು ವೇಗದ ಬೌಲಿಂಗ್ ತಜ್ಞರನ್ನಾಗಿ ಹೊಂದಿದ್ದೇವೆ. ಅಕಾಡೆಮಿಯು ಆಟಗಾರರ ಮೂಲಭೂತತೆ, ತರಬೇತಿಯಲ್ಲಿನ ಏಕರೂಪತೆ ಮತ್ತು ಮೌಲ್ಯ ನಿರ್ವಹಣೆ ಮೂಲಕ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವಿಶ್ವಾಸವಿರಿಸುತ್ತದೆ ಎಂದು ವಿವರಿಸಿದರು.