ಜಾನಪದ ಬೆಳೆಸಲು ಮುಂದಾಗಿ
ಕ.ಪ್ರ.ವಾರ್ತೆ, ಚಿತ್ರದುರ್ಗ, ಮಾ.29 ಜಾಗತೀಕರಣ ಹಲವಾರು ಅವಾಂತರಗಳನ್ನು ತಂದೊಡ್ಡಿರುವ ಪರಿಣಾಮ ಈ ಜಾಗತೀಕರಣಕ್ಕೆ ಪರ್ಯಾಯವಾಗಿ ಜಾನಪದ ಸಂಸ್ಕೃತಿಯನ್ನು ಕಟ್ಟಿ ಬೆಳೆಸಬೇಕಾಗಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್. ಠ್ಯಾಗೋರ್ ಅಭಿಪ್ರಾಯಪಟ್ಟರು.
ಜಿಲ್ಲಾ ಜಾನಪದ ಪರಿಷತ್ತು ಹಮ್ಮಿಕೊಂಡಿದ್ದ ಜಿಲ್ಲಾ ಸಮಿತಿಯೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕಲೆ ಕಲಾವಿದನನ್ನು ಬೆಳೆಸುತ್ತದೆ. ಕಲಾವಿದ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಕ್ರಿಯಾಶೀಲ ಆಗುವುದರೊಂದಿಗೆ ಮೂಲ ಜಾನಪದಕ್ಕೆ ಮುಖಾಮುಖಿಯಾಗಬೇಕಿದೆ. ಮನುಷ್ಯ ಸಂಬಂಧ ಸಡಿಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಜಾನಪದದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕಿದೆ ಎಂದರು.
ಜಾಗೃತಿ ಅಗತ್ಯ: ಜಾನಪದ ಪರಿಷತ್ತು ರಾಜ್ಯ ಘಟಕದ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಜಾನಪದ ಸಂಸ್ಕೃತಿ ಅತಿ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಜಾತ್ರೆ, ಉತ್ಸವ, ಬುಡಕಟ್ಟು ಸಂಸ್ಕೃತಿಯ ಸಂಶೋಧನೆ. ಉಪನ್ಯಾಸ ಮತ್ತು ಜಾನಪದ ರಂಗಕಲೆಗಳನ್ನು ಹಮ್ಮಿಕೊಂಡು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಜಾನಪದ ಕಲೆ, ಸಂಸ್ಕೃತಿ ಉಳಿಸಲು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು. ಅಜ್ಞಾನ ಜಾನಪದ ಕಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ವಿಶೇಷ ಪರಿಶ್ರಮ ಅಗತ್ಯ ಇದೆ. ಕಸಾಪ ಮಾದರಿಯಲ್ಲೇ ಜಾನಪದ ಪರಿಷತ್ತು ಘಟಕಗಳು ಕೂಡಾ ಸ್ಥಳೀಯವಾಗಿಯೇ ಸಂಪನ್ಮೂಲ ಸಂಗ್ರಹಿಸಿ ಚಟುವಟಿಕೆ ನಡೆಸಬೇಕು. ಜಿಲ್ಲಾ ಘಟಕಗಳ ಸಲಹೆ, ಸೂಚನೆಗಳನ್ನು ರಾಜ್ಯ ಪರಿಷತ್ತು ಗಂಭೀರವಾಗಿ ಪರಿಗಣಿಸುತ್ತದೆ ಎಂದರು.
ಪರಂಪರೆ ಮುಂದುವರಿಯಸು ಸಹಕಾರಿ: ಪ್ರತಿ ಹಬ್ಬ ಹರಿದಿನ ಬಂದಾಗಲೂ ಸಮುದಾಯಕ್ಕೆ ಆಯಾ ಹಬ್ಬಗಳ ಹಿಂದಿನ ಜಾನಪದ ಹಿನ್ನೆಲೆ, ಮಹತ್ವ ತಿಳಿಸುವ ಕೆಲಸ ಆಗಬೇಕು. ಆಗ ಮಾತ್ರ ಇಂದಿನ ತಲೆಮಾರು ಜಾನಪದ ಪರಂಪರೆ ಮುಂದುವರಿಸಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಕರಿಯಪ್ಪ ಮಾಳಿಗೆ ಜಿಲ್ಲೆಯ ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಹಾಗೂ ವೈವಿಧ್ಯಮಯ ಕಾರ್ಯಮಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಜಾನಪದ ಕಲಾವಿದರ ಮಾಹಿತಿ ಸಂಗ್ರಹಣಾ ಕಾರ್ಯ ಶೇ.80 ಮುಗಿದಿದ್ದು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದರು.
ಪರಿಷತ್ತಿನ ಕಾರ್ಯದರ್ಶಿ ನಿರಂಜನ ದೇವರಮನೆ ಕಾರ್ಯಕ್ರಮ ನಿರೂಪಿಸಿದರು. ಚಂದ್ರಪ್ಪ ಪ್ರಾರ್ಥಿಸಿದರು. ಸಂವಾದದಲ್ಲಿ ತಾಲೂಕು ಘಟಕಗಳ ಎಲ್ಲ ಅಧ್ಯಕ್ಷರು, ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಜನಪದಾಸಕ್ತರು ಭಾಗವಹಿಸಿದ್ದರು.