ಪದವಿಪೂರ್ವ ಶಿಕ್ಷಣ ಪ್ರಮುಖ ಘಟ್ಟ
ಸಾಗರ: ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು ಈ ಹಂತದಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲು ಹೆಚ್ಚು ಅವಕಾಶವಿರುತ್ತದೆ ಎಂದು ಉಪವಿಭಾಗಾಧಿಕಾರಿ ಡಾ. ಉದಯಕುಮಾರ ಶೆಟ್ಟಿ ಹೇಳಿದರು.
ಇಲ್ಲಿನ ನೌಕರ ಭವನದಲ್ಲಿ ಶುಕ್ರವಾರ ಬೆಂಗಳೂರಿನ ಜ್ಯೋತಿ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ, ಧಾರವಾಡದ ವಿದ್ಯಾಪೋಷಕ್, ಜೋಷಿ ಫೌಂಡೇಶನ್ ಹಾಗೂ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ಪಿಯುಸಿ ನಂತರ ಮುಂದೇನು ಉಚಿತ ಮಾಹಿತಿ ಕರ್ಯಾಗಾರ ಕೈಪಿಡಿ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದ್ವಿತೀಯ ಪಿಯುಸಿಯಲ್ಲಿ ಪಡೆಯುವ ಅಂಕ ಹಾಗೂ ಉನ್ನತ ಶಿಕ್ಷಣಕ್ಕೆ ನೀವು ಆಯ್ಕೆ ಮಾಡಿಕೊಳ್ಳುವ ವಿಷಯದ ಕುರಿತು ಗಂಭೀರ ಚಿಂತನೆ ಅಗತ್ಯ. ನಿಮ್ಮ ಆಸಕ್ತಿ ವಿಷಯವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕೆ ವಿನಹ ಪೋಷಕರ ಒತ್ತಡಕ್ಕೆ ಮಣಿದರೆ ಪೂರ್ಣ ಯಶಸ್ಸು ಸಾಧಿಸುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟರು. ನಮ್ಮ ಶಕ್ತಿಯ ಬಗ್ಗೆ ಸ್ಪಷ್ಟ ಅರಿವು ಇದ್ದಾಗ ಯಾವುದೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಇವತ್ತಿನ ಸಂದರ್ಭದಲ್ಲಿ ಹೆಚ್ಚು ಅವಕಾಶಗಳಿವೆ. ಎಲ್ಲಾ ಅವಕಾಶಗಳು ಫಲವಾಗಿ ಮಾರ್ಪಾಟು ಮಾಡಿಕೊಳ್ಳಲು ನಮ್ಮಲ್ಲಿ ಮನೋಬಲ ಇರಬೇಕು ಎಂದರು.
ವಿದ್ಯಾಪೋಷಕ್ ಸಂಸ್ಥೆಯ ಜಿಲ್ಲಾ ಸಂಚಾಲಕ ಕೆ.ಎನ್. ಭಟ್, ಸಂಸ್ಥೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವು ನೀಡುತ್ತಿದೆ. ಜಿಲ್ಲೆಯಲ್ಲಿ ಈತನಕ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 26.45 ಲಕ್ಷ ಆರ್ಥಿಕ ಸಹಕಾರ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ, ಸಂದರ್ಶನ ಕುರಿತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ನೌಕರ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರವಿಕುಮಾರ್, ಕೆ. ವೆಂಕಟೇಶ್ ಇದ್ದರು.