ರಂಗಾಸಕ್ತಿಯಿಂದ ಮನೋವಿಕಾಸ ಸಾಧ್ಯ
ಕ.ಪ್ರ.ವಾರ್ತೆ, ಸಾಗರ, ಮಾ.29 ರಂಗಾಸಕ್ತಿಯಿಂದ ಮನಸ್ಸು ವಿಕಸನಗೊಳ್ಳುತ್ತದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನಾ. ಸತ್ಯ ಹೇಳಿದರು.
ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಕಾಗೋಡು ರಂಗಮಂಚ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 3 ದಿನದ ನಾಟಕೋತ್ಸವ ಉದ್ಘಾಟಿಸಿ, ಅರಿವು, ಸಂಸ್ಕೃತಿ ಹಾಗೂ ಅಭಿನಯ ರಂಗಭೂಮಿಯ ಕೊಡುಗೆಯಾಗಿದೆ ಎಂದರು.
ಇತ್ತೀಚಿನ ಟಿವಿ ಕಾರ್ಯಕ್ರಮ, ಚಲನಚಿತ್ರಗಳಲ್ಲಿ ಬರುವ ಹಿಂಸಾವಳಿಗಳಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಜನರು ರಂಗಭೂಮಿಯ ಬಗ್ಗೆ ಪುನಃ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ.
ಸಮಾಜಕ್ಕೆ ಸಂದೇಶ ಕೊಡುವ ಒಳ್ಳೆಯ ನಾಟಕಗಳನ್ನು ರಂಗದ ಮೇಲೆ ತಂದರೆ ಜನರು ಖಂಡಿತಾ ಸ್ವೀಕರಿಸುತ್ತಾರೆ. ಈ ನಿಟ್ಟಿನಲ್ಲಿ ರಂಗತಂಡಗಳು ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.
ರಂಗಾಸಕ್ತಿ ಬೆಳೆಯಲಿ: ಪೋಷಕರು ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದ ಅವರು, ರಂಗಾಯಣದಿಂದ ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಮಕ್ಕಳಿಗೆ ರಂಗ ತರಬೇತಿ ಶಿಬಿರ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದು, ಮುಂದಿನ ವರ್ಷ ರಂಗ ಸಹಸ್ರ ಕಾರ್ಯಕ್ರಮದ ಮೂಲಕ ಸಾವಿರ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶ ಹೊಂದಲಾಗಿದೆ ಎಂದರು.
ರಂಗಮಂಚ ಅಧ್ಯಕ್ಷ ಕಾಗೋಡು ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾಪುರ ರಂಗ ಸೌಗಂಧದ ಶ್ರೀಧರ ಹೆಗಡೆ ಹುಲಿಮನೆ ಹಾಜರಿದ್ದರು. ನಂತರ ಸಿದ್ದಾಪುರದ ರಂಗ ಸೌಗಂಧ ತಂಡದಿಂದ ವರದಕ್ಷಿಣೆ ನಾಟಕ ಪ್ರದರ್ಶನಗೊಂಡಿತು.