ಸಿಎಂ ನಿಧಿಗೆ ಬ್ರೇಕ್: ಖಂಡನೆ
ಶಿವಮೊಗ್ಗ: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗಿರುವ ರೋಗಿಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬರಬಹುದಾದ ಹಣಕ್ಕೆ ರಾಜ್ಯ ಚುನಾವಣಾ ಆಯೋಗ ಬ್ರೇಕ್ ಹಾಕಿರುವುದನ್ನು ಜೆಡಿಎಸ್ ಖಂಡಿಸಿದೆ.
ಹೃದಯ, ಕಿಡ್ನಿ ಸಂಬಂಧಿತ ಕಾಯಿಲೆ ಹಾಗೂ ತುರ್ತು ಸಂದರ್ಭದಲ್ಲಿನ ಚಿಕಿತ್ಸೆಗೆ ನೀಡುವ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಹಣದ ನಿರೀಕ್ಷೆಯಲ್ಲಿ ನೂರಾರು ರೋಗಿಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿಯವರು ಸುಮಾರು 3 ಸಾವಿರ ಅರ್ಜಿ ಪರಿಶೀಲಿಸಿ ಮಂಜೂರಾತಿ ನೀಡಿದ್ದು, ಅದರಂತೆ ಸರ್ಕಾರದಿಂದ ಬರುವ ಹಣಕ್ಕಾಗಿ ಕಾಯುತ್ತಿರುವ ಮಂದಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಇದರಿಂದ ಸಾವಿರಾರ ರೋಗಿಗಳು ಸಮಸ್ಯೆ ಎದುರಿಸಬೇಕಾಗಿದೆ. ಆದ್ದರಿಂದ ರಾಜ್ಯ ಚುನಾವಣಾ ಆಯೋಗ ಈ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.