ಸಿರಿಗೆರೆ ಶ್ರೀ ಸಮ್ಮುಖದಲ್ಲಿ ಬಿಎಸ್ವೈ ಪ್ರಮಾಣ ಮಾಡಲಿ: ಮಂಜುನಾಥ್
ಕ.ಪ್ರ ವಾರ್ತೆ, ಶಿಕಾರಿಪುರ, ಮಾ.29
ಸಿರಿಗೆರೆ ಶ್ರೀಗಳ ಸಮ್ಮುಖದಲ್ಲಿ ಅಭ್ಯರ್ಥಿಗಳು ನ್ಯಾಯಬದ್ಧವಾಗಿ ಚುನಾವಣೆಯನ್ನು ಎದುರಿಸುವುದಾಗಿ ಮಾತುಕೊಟ್ಟಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಪ್ರಮಾಣ ಸ್ವೀಕರಿಸುವಂತೆ ಮಾಜಿ ಪುರಸಭಾದ್ಯಕ್ಷ ಹಾಗೂ ಪಟ್ಟಣದ ಶಿವ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸವಾಲು ಹಾಕಿದರು.
ಶುಕ್ರವಾರ ಪಟ್ಟಣದ ಮುದ್ದಿಗೌಡರ ಕೇರಿಯಲ್ಲಿ ನೂತನ ಕಾಂಗ್ರೆಸ್ ಕಚೇರಿಗೆ ನಡೆದ ಶಿಲಾನ್ಯಾಸದ ನಂತರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಕ್ರಮವಾಗಿ ಅಧಿಕಾರಾವಧಿಯಲ್ಲಿ ಗಳಿಸಿದ ಹಣವನ್ನು ಚುನಾವಣೆಯಲ್ಲಿ ಹೇರಳವಾಗಿ ಖರ್ಚು ಮಾಡಿ ಮತದಾರರನ್ನು ಅಪವಿತ್ರಗೊಳಿಸುವ ಮೂಲಕ ಸಾಧಿಸುವ ಗೆಲುವು ಕ್ಷಣಿಕವಾಗಿದೆ.
ಇಂತಹ ವಾಮ ಮಾರ್ಗವನ್ನು ತ್ಯಜಿಸಿ ಕೇವಲ ಅಭಿವೃದ್ಧಿ ಮೂಲಕ ಮತದಾರರನ್ನು ಆಕರ್ಷಿಸಿ. ನ್ಯಾಯಸಮ್ಮತ ಚುನಾವಣೆಯಲ್ಲಿ ನಂಬಿಕೆಯಿದ್ದಲ್ಲಿ ಈ ಕೂಡಲೇ ಚಿಕ್ಕಮಗಳೂರು ಜಿಲ್ಲೆಯ ಅಭ್ಯರ್ಥಿಗಳು ಸಿರಿಗೆರೆ ಶ್ರೀಗಳ ಸಮ್ಮುಖದಲ್ಲಿ ಹಣ, ಹೆಂಡದ ಆಮಿಷವಿಲ್ಲದೆ ಮತದಾರರನ್ನು ಉತ್ತಮ ಕಾರ್ಯಕ್ರಮದ ಮೂಲಕ ತಲುಪಿಸಿ ಗೆಲವು ಸಾಧಿಸುವ ಪ್ರಮಾಣ ಮಾಡಿದ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಪ್ರಮಾಣ ಮಾಡುವಂತೆ ತಿಳಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡರೂ ಪ್ರಮಾಣ ಮಾಡುವುದಾಗಿ ಸವಾಲು ಹಾಕಿದರು.
ಬಾಗುವುದಿಲ್ಲ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪುರಸಭಾ ಸದಸ್ಯ ಗೋಣಿ ಮಾಲತೇಶ ಮಾತನಾಡಿ, ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯಾಗಿ ಶಾಂತವೀರಪ್ಪಗೌಡರ ಘೋಷಣೆಯಿಂದಾಗಿ ನಡುಕವುಂಟಾಗಿ ಯಡಿಯೂರಪ್ಪ ಹಾಗೂ ಪುತ್ರ ರಾಘವೇಂದ್ರ ವಿರೋಧಿ ಮುಖಂಡರನ್ನು ಹಣದ ಆಮಿಷದ ಮೂಲಕ ಸೆಳೆಯುವ ಯತ್ನ ತೀವ್ರಗೊಳಿಸಿದ್ದು ತಾಲೂಕಿನ ಜನತೆ ಇದಕ್ಕೆ ತಲೆಬಾಗುವುದಿಲ್ಲ ಎಂದರು.
ಕಳೆದ ಬಾರಿ ಅನಾರೋಗ್ಯದಿಂದಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೋಲನುಭವಿಸಬೇಕಾಗಿದ್ದು ಯಡಿಯೂರಪ್ಪ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಂತವೀರಪ್ಪಗೌಡ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲಿನ ರುಚಿ ತೋರಿಸಲಿದ್ದಾರೆ ಎಂದರು.
ಪುರಸಭಾ ಸದಸ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್, ಪಾರಿವಾಳದ ಶಿವರಾಂ, ನಾಗರಾಜಗೌಡ, ಮೌನೇಶಾಚಾರ್, ಸುರೇಶ್ ಧಾರವಾಡದ, ಡಾ. ಕರಿಯಪ್ಪ, ಪಾಪಣ್ಣ, ಇದ್ರೂಸ್ಸಾಬ್, ಯುವ ಮುಖಂಡ ರವಿ, ಎಚ್.ಎಸ್. ರವೀಂದ್ರ, ಗಂಗೊಳ್ಳಿ ಸತೀಶ್ ಮತ್ತಿತರರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.