ಭಿನ್ನ ನೆಲೆಯಲ್ಲಿ ಸಿದ್ಧಾಂತದ ಪಾಠ
ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮಾ.30
ಕರ್ನಾಟಕ ರಾಜಕೀಯದ ಮಹಾನ್ ನಾಯಕ ಎಂದೇ ಪರಿಗಣಿಸಲಾಗುವ ಶಾಂತವೇರಿ ಗೋಪಾಲಗೌಡರ ಕರ್ಮಭೂಮಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ. ಜಿಲ್ಲೆಯ ಮೊದಲ ಮುಖ್ಯಮಂತ್ರಿಯನ್ನೂ ಕಂಡ ಕ್ಷೇತ್ರವಿದು. ಸಮಾಜವಾದಿ ಸಿದ್ಧಾಂತಕ್ಕೆ ನೆಲೆ ಕೊಟ್ಟು, ಹಲವು ಭಾರಿ ಹಸ್ತಕ್ಕೂ ಅಭಯ ನೀಡಿದೆ. ಕಮಲವನ್ನೂ ಅರಳಲು ಬಿಟ್ಟಿದೆ. ನೆಚ್ಚಿನ ಅಭ್ಯರ್ಥಿಗಳನ್ನು 2-3 ಬಾರಿ ಗೆಲ್ಲಿಸಿದೆ.
ಈ ಕ್ಷೇತ್ರ ಮೊದಲ ಚುನಾವಣೆಯಲ್ಲಿ ಗೆಲ್ಲಿಸಿದ್ದು ಕಾಂಗ್ರೆಸ್ನ ಕಡಿದಾಳು ಮಂಜಪ್ಪ ಅವರನ್ನು. ಎರಡನೇ ಚುನಾವಣೆಯಲ್ಲೂ ಕಾಂಗ್ರೆಸ್ನ ದರ್ಬಾರ್ ನಡೆಯಿತು. ಸ್ವಾತಂತ್ರ್ಯ ಹೋರಾಟದ ಮೂಲಕ ಹರಡುತ್ತಿದ್ದ ಕಾಂಗ್ರೆಸ್ ಪ್ರಭಾವದಿಂದ ಬಹುಬೇಗ ಹೊರಬಂದ ಈ ಕ್ಷೇತ್ರ ಮಣೆ ಹಾಕಿದ್ದು ಸಮಾಜವಾದಿ ಸಿದ್ಧಾಂತಕ್ಕೆ. 1962ರ ಚುನಾವಣೆಯಲ್ಲಿ ಶಾಂತವೇರಿ ಗೋಪಾಲಗೌಡರನ್ನು ಗೆಲ್ಲಿಸಿದ ತೀರ್ಥಹಳ್ಳಿ ಜನರು 67ರಲ್ಲಿ ಮರು ಆಯ್ಕೆ ಮಾಡಿದರು. 1972ರಲ್ಲಿ ಸೋಷಿಯಲಿಸ್ಟ್ ಪಾರ್ಟಿಯಿಂದ ಕೋಣಂದೂರು ಲಿಂಗಪ್ಪ ಆಯ್ಕೆಯಾದರು.
ವಿಶೇಷವೆಂದರೆ ದೇಶದ ಎಲ್ಲೆಡೆ ಜೆಪಿ ಚಳವಳಿ ಪ್ರಭಾವದಿಂದ ಜನತಾ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾಗ ತೀರ್ಥಹಳ್ಳಿಯ ಮತದಾರರು 1978ರಲ್ಲಿ ಕಾಂಗ್ರೆಸ್ನ ಕಡಿದಾಳ್ ದಿವಾಕರ್ ಅವರನ್ನು ಆಯ್ಕೆ ಮಾಡಿದರು. 1983ರಲ್ಲಿ ಜನತಾ ಪಕ್ಷದ ಡಿ.ಬಿ. ಚಂದ್ರೇಗೌಡ ಆಯ್ಕೆಯಾದರು. ಈ ಅವಧಿಯಲ್ಲಿ ಚಂದ್ರೇಗೌಡರು ವಿಧಾನಸಭೆ ಸಭಾಪತಿಯೂ ಆಗಿದ್ದರು.
ನಂತರದ ಚುನಾವಣೆಯಲ್ಲಿ ಕ್ಷೇತ್ರ ಮತ್ತೆ ಕಾಂಗ್ರೆಸ್ಗೆ ಮಣೆ ಹಾಕಿತು. ಪಟಮಕ್ಕಿ ರತ್ನಾಕರ್ ಆಯ್ಕೆಯಾದರು. ಇದಾದ ನಂತರದ ಮೂರು ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಆರಗ ಜ್ಞಾನೇಂದ್ರ ಕ್ಷೇತ್ರದ ಏಕೈಕ ಹ್ಯಾಟ್ರಿಕ್ ವೀರ. ಇವರ ಗೆಲವಿನ ಸರಪಣಿಗೆ ಬ್ರೇಕ್ ಹಾಕಿದ್ದು ಇವರ ಸಾಂಪ್ರದಾಯಿಕ ಎದುರಾಳಿ ಕಿಮ್ಮನೆ ರತ್ನಾಕರ್.
ಕ್ಷೇತ್ರವಿದು: ಆರಂಭದಲ್ಲಿ ಚಿಕ್ಕಮಗಳೂರು ತಾಲೂಕಿನ ಕೊಪ್ಪ ವ್ಯಾಪ್ತಿಯನ್ನೂ ಹೊಂದಿದ್ದ ತೀರ್ಥಹಳ್ಳಿ ಕ್ಷೇತ್ರ ನಂತರದ ದಿನಗಳಲ್ಲಿ ತಾಲೂಕು ವ್ಯಾಪ್ತಿಗೆ ಸೀಮಿತವಾಯಿತು. 2008ರಲ್ಲಿ ಮತ್ತೆ ಪುನರ್ ವಿಂಗಡಣೆಯಾದಾಗ ಹೊಸನಗರ ಹಾಗೂ ಶಿವಮೊಗ್ಗ ತಾಲೂಕಿನ ಕೆಲ ಭಾಗಗಳನ್ನು ಹೊಂದಿತು. ಸದ್ಯ ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ವಿಸ್ತೀರ್ಣದ ಕ್ಷೇತ್ರಗಳಲ್ಲೊಂದು.
ಭೌಗೋಳಿಕವಾಗಿ ಇಡೀ ಕ್ಷೇತ್ರ ಮಲೆನಾಡು ಪ್ರದೇಶ. ಕರ್ನಾಟಕದ ಚಿರಾಪುಂಜಿ ಎಂದು ಹೆಸರಾಗಿದ್ದ ಆಗುಂಬೆ (ಈಗ ಆ ಕ್ರೆಡಿಟ್ ಇಲ್ಲ) ಈ ತಾಲೂಕಿನಲ್ಲಿಯೇ ಇದೆ. ವಿದ್ಯುತ್ಗಾಗಿ ಭೂಮಿಯನ್ನು ತ್ಯಾಗ ಮಾಡಿದ ಜನರ ಸಮಸ್ಯೆ ದಶಕಗಳಿಂದ ಹಾಗೆಯೇ ಉಳಿದಿದೆ. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ಸಾವಿರಾರು ಕುಟುಂಬಗಳಿವೆ. ಆಗುಂಬೆ ಹೋಬಳಿಯಲ್ಲಿ ನಕ್ಸಲ್ ಸಮಸ್ಯೆ ಬಾಧಿಸುತ್ತಿದೆ. ಅರಣ್ಯ ಭೂಮಿ ಮೇಲೆ ಕಣ್ಣು ಹಾಕಿರುವ ಪಟ್ಟಭದ್ರರಿಂದ ಕ್ಷೇತ್ರವನ್ನು ರಕ್ಷಿಸುವ ಗುರುತರ ಹೊಣೆ ಮುಂಬರುವ ಜನಪ್ರತಿನಿಧಿಗಳ ಮೇಲಿದೆ.
ಕ್ಷೇತ್ರ ವ್ಯಾಪ್ತಿ
ಶಿವಮೊಗ್ಗ ತಾಲೂಕು
ನಿದಿಗೆ
ಹೊಸನಗರ ತಾಲೂಕು
ಹುಂಚ, ನಗರ ಹೋಬಳಿ
ತೀರ್ಥಹಳ್ಳಿ ತಾಲೂಕು
ತೀರ್ಥಹಳ್ಳಿ ಕಸಬಾ ಹೋಬಳಿ, ಆಗುಂಬೆ ಹೋಬಳಿ, ಅಗ್ರಹಾರ ಹೋಬಳಿ, ಮಂಡಗದ್ದೆ ಹೋಬಳಿ, ಮತ್ತೂರು ಹೋಬಳಿ