ಯುವಕರು ರಕ್ತದಾನಕ್ಕೆ ಮುಂದಾಗಿ: ಡಿಸಿ ಬನ್ಸಾಲ್
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.30
ಪ್ರಸ್ತುತ ದಿನಗಳಲ್ಲಿ ಎಷ್ಟೇ ರಕ್ತದಾನ ಶಿಬಿರಗಳು ನಡೆದರೂ ಫಲಾನುಭವಿಗಳಿಗೆ ಸಕಾಲದಲ್ಲಿ ರಕ್ತ ಸಿಗದಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಉತ್ತಮ ಆರೋಗ್ಯ ಹೊಂದಿದ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಹೇಳಿದರು.
ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ, ರಾಷ್ಟ್ರೀಯ ಶಿಕ್ಷಣ ಸಮಿತಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು, ಇಂದಿನ ಯುಗದಲ್ಲಿ ಪ್ರತಿನಿತ್ಯ ಜನರು ಒಂದೆಲ್ಲಾ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಕ್ತದ ಕೊರತೆಯಿಂದ ಸಾಕಷ್ಟು ಜನ ತೊಂದರೆಗೊಳಗಾಗುತ್ತಿರುವುದು ವಿಷಾದನೀಯ ಎಂದರು.
ಉತ್ತಮ ಆರೋಗ್ಯ: ಇಂದಿನ ಯುವ ಪೀಳಿಗೆ ದೇಶದ ಸಂಪತ್ತು. ವಿದ್ಯಾರ್ಥಿಗಳು ತಮ್ಮ ಆರೋಗ್ಯವನ್ನು ಸುಸ್ತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ರಕ್ತದಾನ ಮಾಡುವುದರಿಂದ ಮನುಷ್ಯನ ವಯಸ್ಸು ವೃದ್ಧಿಯಾಗುವುದರೊಂದಿಗೆ ಉತ್ತಮ ಆರೋಗ್ಯ, ಚಟುವಟಿಕೆಯಿಂದ ಕೂಡಿರುತ್ತಾನೆ ಎಂದರು. ಡಾ. ವಿ.ಎಲ್.ಎಸ್. ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತಾ ರಕ್ತದಾನಿಗಳ ಸಂಘದ ಅಧ್ಯಕ್ಷ ಸುರೇಶ್, ರೋಟರಿ ಕ್ಲಬ್ ಶಿವಮೊಗ್ಗ ಜುಬಿಲಿ ಅಧ್ಯಕ್ಷ ನರೇಶ್ ಜೈನ್, ಕುಂದನ್ ಬಸವರಾಜ್, ಯೋಜನಾಧಕಾರಿ ಮಹೇಶ್ವರಪ್ಪ, ಪ್ರಾಂಶುಪಾಲ ಶ್ರೀನಿವಾಸ್ ರಾವ್, ರಾಷ್ಟ್ರೀಯ ಶಿಕ್ಷಣ ಸಮಿತಿ ಖಜಾಂಚಿ ಅಶ್ವತ್ಥ್ ನಾರಾಯಣ್ ಶೆಟ್ಟಿ, ವಿಜಯಕುಮಾರ್, ಧರಣೇಂದ್ರ ದಿನಕರ್ ಇತರರು ಇದ್ದರು.